ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ: ಡಿ ಕೆ ಶಿವಕುಮಾರ್ - ಪ್ರಾಣ ಪ್ರತಿಷ್ಠಾಪನೆ
Published : Jan 7, 2024, 3:43 PM IST
ಬೆಂಗಳೂರು: ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಸಹ ಆಹ್ವಾನಿಸಿಲ್ಲ. ನಾನು ಶಿವ ಭಕ್ತ. ಆಂಜನೇಯನ ಮೂರ್ತಿ ಇಲ್ಲಿದೆ ನೋಡಿ. ಎಲ್ಲಾ ದೇವರುಗಳೂ ನನ್ನ ಹೃದಯದಲ್ಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿಂದು ನಡೆದ ಮಾಧ್ಯಮಗೋಷ್ಟಿ ವೇಳೆ ಮಾತನಾಡಿದ ಅವರು, ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಮಂತ್ರಾಕ್ಷತೆ ಆಗುತ್ತಿರುವುದು ಸಂತೋಷ ಎಂದು ತಿಳಿಸಿದರು.
ಬೊಮ್ಮಾಯಿಗೆ ಮರೆವು ಶುರುವಾಗಿದೆ: ಅಕ್ಕಿ ವಿತರಣೆಯಲ್ಲಿ ರಾಜ್ಯ ಸರ್ಕಾರದ ಪಾಲಿಲ್ಲ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಫ್ರೆಂಡ್ ಬೊಮ್ಮಾಯಿ ಅವರಿಗೆ ಮರೆವು ಶುರುವಾಗಿದೆ. ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದದ್ದು ಮನಮೋಹನ್ ಸಿಂಗ್ ಸರ್ಕಾರ. ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ಜಾರಿಗೆ ತಂದ್ರು ಎಂದು ತಿಳಿಸಿದ್ದಾರೆ.
ದೇವೇಗೌಡರ ಮಾತೇ ಆಶೀರ್ವಾದ: ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರಿಂದ ಕಾಂಗ್ರೆಸ್ ಪಕ್ಷದ ಅಂತ್ಯ ಎಂಬ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷಕ್ಕೆ 138 ವರ್ಷ ಆಗಿದೆ. ಇಬ್ಬರು ಪಕ್ಷೇತರರ ಸಹಿತ ರಾಜ್ಯದಲ್ಲಿ ಕಾಂಗ್ರೆಸ್ಗೆ 138 ಸ್ಥಾನ ಸಿಕ್ಕಿದೆ. ಅವರು ನಮ್ಮನ್ನು ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಅವರ ಮಾತುಗಳೆಲ್ಲವೂ ನಮಗೆ ಆಶೀರ್ವಾದ ಎಂದರು. ಇನ್ನು ನೈಸ್ ವಿಚಾರವಾಗಿ ಮಾಜಿ ಸಚಿವ ಟಿ ಬಿ ಜಯಚಂದ್ರ ಅವರ ಬಾಯನ್ನ ಸರ್ಕಾರ ಕಟ್ಟಿಹಾಕಿದೆ ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಅಧಿವೇಶನದಲ್ಲಿ ಚರ್ಚೆ ಮಾಡಬಹುದಿತ್ತು. ಯಾಕೆ ಗೈರಾದ್ರು?. ಮುಂದೆ ಚರ್ಚೆ ಮಾಡೋಣ ಎಂದು ಡಿಕೆಶಿ ತಿರುಗೇಟು ನೀಡಿದರು.