ಅಪಾಯದ ಮಟ್ಟ ಮೀರಿ ಹರಿದ ಗಂಗಾನದಿ.. ಋಷಿಕೇಶ ಶಿವನ ಪ್ರತಿಮೆ ಮುಳುಗುವ ಹಂತಕ್ಕೆ ತಲುಪಿದ ನೀರು
ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಜೋರು ಮಳೆಯಿಂದಾಗಿ ಗಂಗಾ ನದಿಯ ನೀರಿನ ಮಟ್ಟ ಸೋಮವಾರ ಅಪಾಯದ ಗಡಿ ದಾಟಿದೆ. ನೀರಿನ ಮಟ್ಟದಲ್ಲಿ ಹೆಚ್ಚಳವಾಗಿರುವುದರಿಂದ ಋಷಿಕೇಶದಲ್ಲಿರುವ ಶಿವನ ಪ್ರತಿಮೆ ಮುಳುಗುವ ಹಂತಕ್ಕೆ ತಲುಪಿತ್ತು. ಶಿವನ ತಲೆಯಲ್ಲಿರುವ ಗಂಗೆಗೇ ಜಲಾಭಿಷೇಕವಾಗುತ್ತದೆಯೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿವನ ಪ್ರತಿಮೆಯ ಮೇಲೆ ನೀರು ಆವರಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಮಳೆ ಕೊಂಚ ವಿರಾಮ ತೆಗೆದುಕೊಂಡ ಕಾರಣ ಇಂದು ಗಂಗಾನದಿಯಲ್ಲಿ ನೀರಿನ ಮಟ್ಟ ಈಗ ಕಡಿಮೆಯಾಗಿದೆ.
ಮಳೆ ಕಡಿಮೆಯಾಗಿರುವುದರಿಂದ ಶಿವನ ಮೂರ್ತಿಯ ಮಟ್ಟದಿಂದ ನೀರು ಕೆಳಗಿಳಿದಿದೆ. ಇಂದು ಋಷಿಕೇಶದ ಪರಮಾರ್ಥ ನಿಕೇತನದಲ್ಲಿರುವ ಗಂಗಾ ಘಾಟ್ನಲ್ಲಿ ನೀರಿನ ಮಟ್ಟ ಸ್ವಲ್ಪ ಕಡಿಮೆಯಾಗಿದೆ. ನೀರಿನ ಮಟ್ಟ ಜಾಸ್ತಿಯಾಗಿದ್ದಾಗ ಹಾಗೂ ಇಂದು ಕಡಿಮೆಯಾದಾಗ ಶಿವನ ವಿಗ್ರಹದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಸೋಮವಾರ ಗಂಗಾನದಿಯಲ್ಲಿ ನೀರಿನ ಮಟ್ಟ ಶಿವನ ಮೂರ್ತಿ ವರೆಗೆ ತಲುಪುತ್ತಿದ್ದಂತೆ ಜನರಲ್ಲಿ ಭಯದ ವಾತಾವರಣ ಹೆಚ್ಚಾಗಿತ್ತು. 2013ರ ಜಲದುರಂತ ಮತ್ತೆ ಮರುಕಳಿಸುತ್ತದೆಯೋ ಎನ್ನುವ ಆತಂಕ ಎದುರಾಗಿತ್ತು. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಋಷಿಕೇಶದಿಂದ ಹರಿದ್ವಾರದವರೆಗೆ ಎಲ್ಲ ಕಡೆ ಜಲಾವೃತವಾಗಿತ್ತು. ಆದರೆ ಇಂದು ನೀರಿನ ಪ್ರಮಾಣ ಕಡಿಮೆಯಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ನೋದಿ:Himachal Pradesh: ಹಿಮಾಚಲದಲ್ಲಿ ಮತ್ತೆ ಭೂಕುಸಿತ; 5 ಮನೆಗಳು ನೆಲಸಮ, ಇಬ್ಬರು ಸಾವು