ವಿಶ್ವ ಮೀನುಗಾರಿಕೆ ದಿನಾಚರಣೆ: ಮತ್ಸ್ಯ ಶಿಕಾರಿ ಬಿಟ್ಟು ಸ್ಪರ್ಧೆಗಿಳಿದ ಕಡಲ ಮಕ್ಕಳು
Published : Nov 20, 2023, 10:55 PM IST
ಕಾರವಾರ: ವಿಶ್ವ ಮೀನುಗಾರಿಕೆ ದಿನಾಚರಣೆ ನಿಮಿತ್ತ ಇಂದು ಮೀನುಗಾರರಿಗೆ ಜಲಸಾಹಸಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ತಮ್ಮ ಜೊತೆಗಾರರೊಂದಿಗೆ ಪೈಪೋಟಿಗಿಳಿದ ಕಡಲಮಕ್ಕಳ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ನ.21 ರಂದು ಆಚರಿಸಲಾಗುತ್ತಿರುವ ವಿಶ್ವ ಮೀನುಗಾರಿಕೆ ದಿನದ ನಿಮಿತ್ತ ಸ್ಥಳೀಯರೇ ಕೂಡಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಜಲಸಾಹಸಿ ಕ್ರೀಡೆಗಳನ್ನು ಆಯೋಜಿಸಿರುವುದು ವಿಶೇಷ.
ದಿನ ನಿತ್ಯ ಮತ್ಸ್ಯ ಶಿಕಾರಿಯಲ್ಲಿ ಬ್ಯುಸಿಯಾಗಿರುತ್ತಿದ್ದ ಕಡಲಮಕ್ಕಳು ಒಟ್ಟುಗೂಡಿ ಏಂಡಿ ದೋಣಿ, ಪಾತಿ ದೋಣಿ ಸ್ಫರ್ಧೆ ಹಾಗೂ ಈಜು ಸ್ಫರ್ಧೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಕರಾವಳಿಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೂರಾರು ಮೀನುಗಾರರು ಗೆಲುವಿಗಾಗಿ ತಮ್ಮವರ ನಡುವೇ ಸೆಣೆಸಾಡಿದರು.
ಜಲಸಾಹಸಿ ಕ್ರೀಡೆಗಳ ಆಯೋಜಕ ಚೇತನ್ ಹರಿಕಂತ್ರ ಮಾತನಾಡಿ, ಇಷ್ಟು ವರ್ಷಗಳ ಕಾಲ ವಿಶ್ವ ಮೀನುಗಾರಿಕಾ ದಿನಾಚರಣೆ ಕೇವಲ ಕ್ಯಾಲೆಂಡರ್ ಗಳಿಗೆ ಮಾತ್ರ ಸೀಮಿತವಾದಂತಿತ್ತು. ಆದರೆ, ಇದೀಗ ಮೀನುಗಾರರು ಎಲ್ಲರೂ ಒಗ್ಗಟ್ಟಾಗಿ ಕಳೆದ ಕೆಲ ವರ್ಷಗಳಿಂದ ಭಿನ್ನ ವಿಭಿನ್ನವಾಗಿ ಆಚರಿಸುತ್ತಿದ್ದೇವೆ. ಇದರಿಂದ ಮೀನುಗರಾರ ಒಗ್ಗಟ್ಟು ಪ್ರದರ್ಶನವಾಗುತ್ತಿದೆ. ಅಲ್ಲದೇ ಇಂದಿನ ಯಾಂತ್ರಿಕೃತ ವ್ಯವಸ್ಥೆಯಲ್ಲಿ ಅದೇಷ್ಟೋ ಸಾಂಪ್ರದಾಯಿಕ ಮೀನುಗಾರಿಕಾ ಪದ್ಧತಿಗಳು ನಶಿಸುತ್ತಿವೆ. ಅದೆಲ್ಲವನ್ನು ಇಂದಿನ ಯುವ ಪಿಳಿಗೆಗೆ ಹಾಗೂ ಸಾರ್ವಜನಿಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಮೀನುಗಾರ ಮೋಹನ್ ತಾಂಡೇಲ ಮಾತನಾಡಿ, ನಿತ್ಯವೂ ಮೀನುಗಾರಿಕೆಯಲ್ಲಿ ತೊಡಗುವ ನಮಗೆ ಇಂತಹ ಚಟುವಟಿಕೆಗಳು ತುಂಬಾ ಖುಷಿ ನೀಡುತ್ತದೆ. ಪ್ರತಿ ವರ್ಷವೂ ಇಂತಹ ಚಟುವಟಿಕೆಗಳನ್ನು ಆಯೋಜನೆ ಮಾಡಬೇಕು ಎಂದರು.
ಇನ್ನು ಏಂಡಿ ದೋಣಿ ಸ್ಫರ್ಧೆಯಲ್ಲಿ ಕಾರವಾರದ ಸೀತಾರಾಮ ಎಂ.ಹರಿಕಂತ್ರ ಪ್ರಥಮ, ಶಿವು ದುರ್ಗೇಕರ್ ದ್ವಿತೀಯ ಮತ್ತು ಉಲ್ಲಾಸ ಆರ್.ಕೋಳಿ ತೃತೀಯ ಸ್ಥಾನ ಪಡೆದರು. ಕೈಪಾತಿ ದೋಣಿ ಸ್ಫರ್ಧೆಯಲ್ಲಿ ಕಾರವಾರ ಚಿತ್ತಾಕುಲ ಗಣಪತಿ ಅಂಬಿಗ ಪ್ರಥಮ, ಅಂಕೋಲಾ ಹಾರವಾಡ ಸೀಬರ್ಡ್ ಕಾಲನಿಯ ರಂಜನ ಡಿ.ತಾಂಡೇಲ್ ದ್ವಿತೀಯ ಮತ್ತು ಚಿತ್ತಾಕುಲದ ಸಾಯಿನಾಥ ಆರ್.ಹರಿಕಂತ್ರ ತೃತೀಯ ಸ್ಥಾನ ಪಡೆದರು. ಈಜು ಸ್ಫರ್ಧೆಯಲ್ಲಿ ಕಾರವಾರದ ಸುರ್ದಶನ ತಾಂಡೇಲ್ ಪ್ರಥಮ, ನಾಗರಾಜ ತಾರಿ ದ್ವಿತೀಯ ಮತ್ತು ವಿಘ್ನೇಶ ಹರಿಕಂತ್ರ ತೃತೀಯ ಸ್ಥಾನ ಪಡೆದರು.