Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ - arishina gundi falls
ಕೊಲ್ಲೂರು (ಉಡುಪಿ): ಬಂಡೆಯ ಮೇಲೆ ನಿಂತು ಜಲಪಾತ ವೀಕ್ಷಿಸುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಕೊಚ್ಚಿಹೋಗಿರುವ ಯುವಕ. ಈ ಯುವಕ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಯುವಕ, ಜಲಪಾತ ವೀಕ್ಷಣೆಗೆಂದು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಯುವಕ ಶರತ್ ಕುಮಾರ್ ಬಂಡೆಯ ಮೇಲೆ ನಿಂತು ಧುಮ್ಮಿಕ್ಕುವ ಜಲಪಾತವನ್ನು ವೀಕ್ಷಿಸುತ್ತಿದ್ದ. ಇದನ್ನು ಆತನ ಸ್ನೇಹಿತ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿದ್ದ. ಆದರೆ, ಯುವಕ ಶರತ್ ಕುಮಾರ್ ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಯುವಕನಿನಾಗಿ ಸುಮಾರು 6 ಗಂಟೆಗಳ ಕಾಲ ಸ್ಥಳೀಯರು, ಆಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಮತ್ತು ಮುಳುಗು ತಜ್ಞರ ತಂಡಗಳು ಶೋಧ ಕಾರ್ಯಚರಣೆ ನಡೆಸಿದ್ದಾರೆ. ಆದರೂ ಸಹ ಪತ್ತೆಯಾಗಿಲ್ಲ. ಭಾರಿ ಮಳೆ ಹಾಗೂ ಕತ್ತಲೆಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ನಾಳೆ ಮುಂದುವರೆಯಲಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಇದನ್ನೂ ಓದಿ: Gokak Water Falls: ಹಾಲ್ನೊರೆಯಂತೆ ಚಿಮ್ಮುತ್ತಿದೆ ಗೋಕಾಕ್ ಜಲಪಾತ; ಹರಿದು ಬರ್ತಿದೆ ಪ್ರವಾಸಿಗರ ದಂಡು