Watch video: ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ವಾಹನಗಳು: ಮನೆಗಳಿಗೆ ಕೆಸರು ನುಗ್ಗಿ ಜನರ ಪರದಾಟ
ಕುಲು (ಹಿಮಾಚಲ ಪ್ರದೇಶ) : ಮುಂಗಾರು ಮಳೆಯ ಅಬ್ಬರದಿಂದಾಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ. ನಿನ್ನೆ ರಾತ್ರಿ ಖಾರಹಾಲ್ ಕಣಿವೆಯಲ್ಲಿ ಮೇಘಸ್ಫೋಟ ಆದ ನಂತರ ಥರ್ಮಹಾನ್, ರಾಮಶಿಲಾಗಳ ಅನೇಕ ಮನೆಗಳಿಗೆ ಮಣ್ಣು ಮಿಶ್ರಿತ ನೀರು ನುಗ್ಗಿದೆ. ಇದಲ್ಲದೇ ಜುವಾನಿ ನಾಲೆಯಲ್ಲಿ ಪ್ರವಾಹ ಉಂಟಾಗಿ ಹಲವು ವಾಹನಗಳು ಕೂಡ ನೀರಿನ ರಭಕ್ಕೆ ಕೊಚ್ಚಿ ಹೋಗಿವೆ.
ಇನ್ನು ಕೈಸ್ ನಾಲೆ ಪ್ರವಾಹದಲ್ಲೂ ಓರ್ವ ಸಿಲುಕಿ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಧಾಲ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಮನೆಗಳಿಗೆ ಕೆಸರು, ನೀರು ನುಗ್ಗಿದ್ದ ಪರಿಣಾಮ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದ್ದು, ರಾಮಶಿಲಾ ದಿಂದ ನಗರ ಭಾಗಕ್ಕೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಜಿಲ್ಲಾಡಳಿತ ತಂಡ ಕೂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಕೈಗೊಂಡಿದೆ.
ಅವಶೇಷಗಳನ್ನು ತೆಗೆಯುವ ಕಾರ್ಯವೂ ಆರಂಭವಾಗಿದ್ದು, ಟ್ಯಾಂಕರ್ ಮೂಲಕವೂ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಆದಷ್ಟು ಬೇಗ ಕಣಿವೆಯಲ್ಲಿ ಸಿಲುಕಿರುವ ಅವಶೇಷಗಳನ್ನು ತೆಗೆದು ರಸ್ತೆಗಳನ್ನು ತೆರವುಗೊಳಿಸಿ ಜನತೆಗೆ ವಿದ್ಯುತ್, ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಲು ಜಿಲ್ಲಾಧಿಕಾರಿ ಅಶುತೋಷ್ ಗರ್ಗ್ ತಿಳಿಸಿದ್ದಾರೆ.
ಇದನ್ನೂ ಓದಿ : Assam flood: 13 ಜಿಲ್ಲೆಗಳಲ್ಲಿ ಪ್ರವಾಹ, 371 ಗ್ರಾಮಗಳು ಜಲಾವೃತ.. ಸಂಕಷ್ಟದಲ್ಲಿ ಒಂದು ಲಕ್ಷ ಜನ