ಶಿವಮೊಗ್ಗ: ನೀರು ಪೂರೈಕೆಗೆ ಹಣ ಬಿಡುಗಡೆ ಮಾಡದ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳಿಂದ ಪಾದಯಾತ್ರೆಯ ಪ್ರತಿಭಟನೆ
ಶಿವಮೊಗ್ಗ :ಕುಡಿಯುವ ನೀರು ಪೂರೈಕೆಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ತಾಲೂಕು ಟಾಸ್ಕ್ ಫೋರ್ಸ್ ಅಧಿಕಾರಿಗಳ ವಿರುದ್ಧ ಆರೋಪಿಸಿ ನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ಸದಸ್ಯರು 10 ಕಿ.ಮೀ ದೂರ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮಳೆಯಲ್ಲಿಯೇ ತಾಲೂಕು ಆಡಳಿತ ಕಚೇರಿಗೆ ನಡೆದು ಬಂದ ಜನಪ್ರತಿನಿಧಿಗಳು ಹಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಕರುಣಾಕರ ಶೆಟ್ಟಿ ಎಚ್ಚರಿಕೆ ಕೊಟ್ಟರು. ಇತ್ತೀಚಿಗೆ ಹೊಸನಗರ ತಾಲೂಕಿನ ನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಇದೆ ವೇಳೆ ತಾಲೂಕು ಟಾಸ್ಕ್ ಫೋರ್ಸ್ ರಚನೆ ಮಾಡಿ ಗ್ರಾಮ ಪಂಚಾಯತಿಗಳಿಗೆ ನೀರು ಪೂರೈಕೆ ಮಾಡಲು ಜಿಲ್ಲಾ ಪಂಚಾಯತ್ ಸೂಚಿಸಿತ್ತು.
ನೀರು ಪೂರೈಕೆ ಮಾಡಿದ ಬಳಿಕ ಗ್ರಾಮ ಪಂಚಾಯತಿಗಳು ಆಯಾ ತಾಲೂಕು ಪಂಚಾಯತ್ಗಳ ಟಾಸ್ಕ್ ಫೋರ್ಸ್ ಮೂಲಕ ಹಣ ಪಡೆಯಬೇಕಿತ್ತು. ಆದರೆ ಅಧಿಕಾರಿಗಳು ಹಣ ಬಿಡುಗಡೆ ಮಾಡದ ಕಾರಣ ಟ್ಯಾಂಕರ್ ಮಾಲೀಕರು ಆಯಾ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ಮನೆಗಳಿಗೆ ಹೋಗಿ ನಿಮ್ಮ ಸೂಚನೆ ಮೇರೆಗೆ ನಾವು ನೀರು ಪೂರೈಕೆ ಮಾಡಿದ್ದು, ನಮಗೆ ಹಣ ನೀಡಿ ಎಂದು ಒತ್ತಾಯಿಸುತ್ತಿದ್ದರು. ಹೀಗಾಗಿ ಬೇಸತ್ತ ಜನಪ್ರತಿನಿಧಿಗಳು ಬಿಡುಗಡೆ ಆಗದ ಹಣಕ್ಕಾಗಿ ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ :ಹಳೆ ಮೊಬೈಲ್ ತಗೋರಿ, ಹೊಸ ಮೊಬೈಲ್ ಕೊಡಿ: ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ