ಕೊಪ್ಪಳ: ಮತಯಾಚನೆಗೆ ಬಂದ ಮಾಜಿ ಸಚಿವ ಶಿವರಾಜ ತಂಗಡಗಿಗೆ ಗ್ರಾಮಸ್ಥರಿಂದ ತರಾಟೆ
ಗಂಗಾವತಿ(ಕೊಪ್ಪಳ): ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿಗೆ ಗ್ರಾಮಸ್ಥರು ಘೇರಾವ್ ಹಾಕಿ, ತರಾಟೆಗೆ ತೆಗೆದುಕೊಂಡ ಘಟನೆ ಕನಕಗಿರಿ ಕ್ಷೇತ್ರದ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಶಿವರಾಜ ತಂಗಡಗಿ ಮತಯಾಚನೆಗೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಸುತ್ತುವರೆದ ಗ್ರಾಮಸ್ಥರು ಕೋಮುಗಲಭೆಯಿಂದ ಗ್ರಾಮದಲ್ಲಿ ಜನ ಸಾವನ್ನಪ್ಪಿದ್ದಾಗ ಸೌಜನ್ಯಕ್ಕೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈಗೇಕೆ ಮತ ಕೇಳಲು ಬಂದಿದ್ದೀರಿ ಎಂದು ಪ್ರಶ್ನಿಸಿದರು.
ಘಟನೆ ನಡೆದಾಗ ನಿಮ್ಮೂರಿಗೆ ಕಾಲಿಡಲ್ಲ ಎಂದು ಹೇಳಿದ್ದ ನೀವು ಈಗೇಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ಮತಯಾಚನೆಗೆ ಬಂದಿದ್ದ ತಂಗಡಗಿ ಅವರನ್ನು ಮರಳಿ ಹೋಗುವಂತೆ ಪಟ್ಟು ಹಿಡಿದರು. ಹಸಿರು ಟೋಪಿ, ಹಸಿರು ಶಾಲು ಧರಿಸಿ ಥೇಟ್ ಮುಸ್ಲಿಂ ಸಮುದಾಯದ ವ್ಯಕ್ತಿಯಂತೆ ಬಂದಿದ್ದ ಶಿವರಾಜ ತಂಗಡಗಿಗೆ ಗ್ರಾಮದಲ್ಲಿ ಪ್ರಚಾರ ಮಾಡುವುದಕ್ಕೆ ಅಡ್ಡಿಪಡಿಸಿದರು. ಈ ವೇಳೆ ತಂಗಡಗಿ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಈ ವೇಳೆ ಮಧ್ಯ ಪ್ರವೇಶಿಸಿದ ಶಿವರಾಜ ತಂಗಡಗಿ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
ಇದನ್ನೂ ಓದಿ:ದಾವಣಗೆರೆ: ಪ್ರಚಾರಕ್ಕೆ ಬಂದ ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರಿಂದ ತರಾಟೆ