Monsoon: ದೊಡ್ಡಬಳ್ಳಾಪುರದಲ್ಲಿ ಮಳೆಗಾಗಿ 'ಚಂದಮಾಮ ಮದುವೆ' ಮಾಡಿಸಿದ ಗ್ರಾಮಸ್ಥರು: ವಿಡಿಯೋ
ದೊಡ್ಡಬಳ್ಳಾಪುರ: ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿ ಹಲವು ದಿನಗಳೇ ಕಳೆದಿವೆ. ಪ್ರಾರಂಭದಲ್ಲಿ ಅಬ್ಬರಿಸಿದ್ದ ವರುಣ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ. ಈ ಬಾರಿ ಉತ್ತಮವಾಗಿ ಮಳೆಯಾಗುತ್ತದೆ ಎಂದು ರೈತರು ತಮ್ಮ ಹೊಲಗಳಲ್ಲಿ ಬೀಜ ಬಿತ್ತಿದ್ದರು. ಈಗ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆ ಮತ್ತೆ ಯಾವಾಗ ಬರುತ್ತೆ ಎಂದು ಆಕಾಶದತ್ತ ನೋಡುವ ಹಾಗಾಗಿದೆ.
ಮಳೆಗಾಗಿ ತಾಲೂಕಿನ ಗ್ರಾಮಗಳಲ್ಲಿ ಗ್ರಾಮ್ಯ ಸೊಗಡಿನ ವಿಶೇಷ ಪೂಜೆ, ಆಚರಣೆಗಳನ್ನು ಮಾಡಲಾಗುತ್ತಿದೆ. ಅದೇ ರೀತಿ, ದೊಡ್ಡಬಳ್ಳಾಪುರದ ಕೆಳಗಿನಜೂಗಾನಹಳ್ಳಿ ಗ್ರಾಮದಲ್ಲಿ ಮಳೆ ಬರಲೆಂದು ಇಬ್ಬರು ಗಂಡು ಮಕ್ಕಳಿಗೆ ಸಾಂಕೇತಿಕವಾಗಿ ಚಂದಮಾಮ ಮದುವೆ ಮಾಡುವ ಮೂಲಕ ವರುಣದೇವರನ್ನು ಪ್ರಾರ್ಥಿಸಿದ್ದಾರೆ.
ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಗಿತ್ತು. ಇಬ್ಬರು ಬಾಲಕರು ಪೂಜೆಗೆ ಕುಳಿತಿದ್ದರು. ನಂತರ ಗ್ರಾಮಸ್ಥರು ಒಂದೆಡೆ ಸೇರಿ ಮಳೆರಾಯನ ಕುರಿತು ಹಾಡುಗಳನ್ನು ಹಾಡಿದರು. ನೃತ್ಯ ಮಾಡಿ ಈಗಲೇ ಬಾರೋ ಮಳೆರಾಯ ಎಂದು ಕರೆದಿದ್ದು ವಿಶೇಷವಾಗಿತ್ತು.