40ವರ್ಷ ಕಳೆದರೂ ಈಡೇರದ 1ಕಿ.ಮೀ ರಸ್ತೆಯ ಕನಸು, ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೇದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟತ್ತಾರು - ನಿಡ್ಯಾಣ ಸಂಪರ್ಕಿಸುವ ಕೇವಲ 1 ಕಿಲೋಮೀಟರ್ ದೂರದ ರಸ್ತೆಯನ್ನು ದುರಸ್ತಿಪಡಿಸುವಂತೆ ಕಳೆದ 40 ವರ್ಷಗಳಿಂದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಕೊಟ್ಟು ಈ ಭಾಗದ ಜನ ರೋಸಿ ಹೋಗಿದ್ದಾರೆ.
ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳನ್ನು ಹೊಂದಿದೆ. ಗ್ರಾಮಸ್ಥರು ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನಲ್ಲೇ ಬದುಕು ಸಾಗಿಸಬೇಕಾದ ಪರಿಸ್ಥಿತಿಯಿದೆ. ಕೇವಲ ಒಂದು ಮನೆ ಇದ್ದಲ್ಲಿ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿಕೊಡುವ ಸ್ಥಳೀಯ ಪಂಚಾಯತ್ ಈ ಭಾಗದ ಜನರ ಸಮಸ್ಯೆಗೆ ಈವರೆಗೂ ಸ್ಪಂದಿಸಿಲ್ಲ ಎನ್ನುವ ಆರೋಪ ಸ್ಥಳೀಯ ನಿವಾಸಿಗಳದ್ದಾಗಿದೆ.
ಪ್ರತಿ ಸಲವೂ ಗ್ರಾಮಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕರ ಕಚೇರಿ ಸೇರಿದಂತೆ ಎಲ್ಲ ಕಡೆಗೂ ಮನವಿ ಸಲ್ಲಿಸಿರುವ ಸ್ಥಳೀಯರಿಗೆ ಶೂನ್ಯ ಫಲಿತಾಂಶ ದೊರೆತಿದೆ. ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತ ಈ ಗ್ರಾಮದ ಜನ ಇದೀಗ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕೇವಲ ಒಂದು ಕಿಲೋಮೀಟರ್ ರಸ್ತೆಯ ದುರಸ್ತಿ ಬಗ್ಗೆ ಬೇಡಿಕೆಯಿಟ್ಟ ಗ್ರಾಮಸ್ಥರ ಬೇಡಿಕೆ ಕಡೆಗಣಿಸಲು ಕಾರಣವೇನು ಅನ್ನೋದು ಯಾರಿಗೂ ತಿಳಿದಿಲ್ಲ. ದಿನಕ್ಕೆ ಒಂದು ಮೀಟರ್ ಡಾಂಬರೀಕರಣ ಮಾಡಿದ್ದರೂ, ಮುರ್ನಾಲ್ಕು ವರ್ಷದಲ್ಲಿ ಮುಗಿದು ಹೋಗುತ್ತಿದ್ದ ಕಾಮಗಾರಿಗೆ ಇಷ್ಟೊಂದು ಮೀನಮೇಷ ಎಣಿಸಲು ಕಾರಣವೇನು ಅನ್ನೋದನ್ನು ಸಂಬಂಧಪಟ್ಟವರೇ ತಿಳಿಸಬೇಕಿದೆ.
ಇದನ್ನೂ ಓದಿ:ಕಡಬದಲ್ಲಿ ಕಾಡುತ್ತಿದೆ ಕಾಡ್ಗಿಚ್ಚು.. ವನ್ಯ ಪ್ರಾಣಿಗಳ ಪರದಾಟ