ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದ ಕಳ್ಳ: ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು - ಕಳ್ಳತನ ಮಾಡಲು ಬಂದು ಸಿಕ್ಕಿ ಬಿದ್ದ ಕಳ್ಳ
ಆನೇಕಲ್:ಕಳ್ಳತನ ಮಾಡುವ ವೇಳೆ ಸಿಕ್ಕಿಬಿದ್ದ ಕಳ್ಳನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಆನೇಕಲ್ನ ಕುವೆಂಪು ನಗರದಲ್ಲಿ ಈ ಘಟನೆ ನಡೆದಿದೆ. ನಗರದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು. ಸರಣಿ ಕಳ್ಳತನ ಪ್ರಕರಣಗಳು ಗ್ರಾಮಸ್ಥರ ನಿದ್ದೆಗೆಡಿಸಿದ್ದವು. ಹೀಗಿರುವಾಗ ಸೋಮವಾರ ರಾತ್ರಿ ಬೈಕ್ ಕದಿಯಲು ಬಂದ ಮೂವರಲ್ಲಿ ಒಬ್ಬ ಕಳ್ಳ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಖದೀಮರ ಗ್ಯಾಂಗ್ ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಬೈಕ್ಗಳನ್ನು ಕಳ್ಳತನ ಮಾಡುತ್ತಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕಳ್ಳರ ಹಾವಳಿಗೆ ಬ್ರೇಕ್ ಬಿದ್ದಿರಲಿಲ್ಲ. ಹೀಗಾಗಿ ಗ್ರಾಮಸ್ಥರೇ ಕಳ್ಳರನ್ನ ಹಿಡಿಯಲು ಪ್ಲಾನ್ ಮಾಡಿದ್ದರು. ಅದರಂತೆ ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದಾಗ ಮೂವರ ಪೈಕಿ ಒಬ್ಬನನ್ನು ಸೆರೆ ಹಿಡಿಯಲಾಗಿದೆ.
ದೊಣ್ಣೆಗಳಿಂದ ಹಲ್ಲೆ ನಡೆಸಿದ್ದರಿಂದ ಕಳ್ಳನ ಕಾಲು ಮುರಿದಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡಿದ್ದ ಕಳ್ಳನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳನ ವಿರುದ್ಧ ಪ್ರಕರಣ ದಾಖಲಾಗಿದೆ. ಈತನ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ಇದನ್ನೂ ಓದಿ:ಬೆಂಗಳೂರು: ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಚೆನ್ನೈ ಮೂಲದ ಆರೋಪಿಗಳ ಬಂಧನ