ಕೃಷ್ಣೆಯ ಕಳೆ ಹೆಚ್ಚಿಸಿದ 'ಜಲರಾಶಿ': ಆಲಮಟ್ಟಿ ಜಲಾಶಯ ಭರ್ತಿಗೆ ದಿನಗಣನೆ - ನಿಡಗುಂದಿ ತಾಲೂಕಿನ ಆಲಮಟ್ಟಿ
ವಿಜಯಪುರ:ಉತ್ತರ ಕರ್ನಾಟಕದ ಜೀವನಾಡಿ ನಿಡಗುಂದಿ ತಾಲೂಕಿನ ಆಲಮಟ್ಟಿ(ಲಾಲ್ ಬಹದ್ದೂರ್ ಶಾಸ್ತ್ರಿ) ಜಲಾಶಯ ಭರ್ತಿ ಯಾಗಲು ದಿನಗಣನೆ ಆರಂಭವಾಗಿದೆ. ಇದೇ ರೀತಿ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಬಿಡುಗಡೆಯಾದರೆ ಇಂದು ಸಂಜೆ ಇಲ್ಲವೇ ನಾಳೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
519.60 ಮೀಟರ್ ಸಾಮರ್ಥ್ಯದ ಜಲಾಶಯದಲ್ಲಿ ಇಂದು ಬೆಳಗ್ಗೆ 6 ಗಂಟೆಯೊಳಗೆ 519.25 ಮೀಟರ್ ನಷ್ಟು ಸಂಗ್ರವಾಗಿದೆ. 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಜಲಾಶಯ ಹೊಂದಿದೆ. ಈಗ 117.038 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನೂ 6 ಟಿಎಂಸಿ ನೀರು ಸಂಗ್ರಹವಾದರೆ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ.
87.841 ಕ್ಯೂಸೆಕ್ ಒಳಹರಿವು ಇದೆ. 44.231 ಕ್ಯೂಸೆಕ್ ಹೊರ ಹರಿವು ಇದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಒಳ ಹರಿವು ನಿತ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಜಲಾಶಯದಲ್ಲಿ ನೀರು ಸಂಗ್ರಹಿಸಲು ಕೆಬಿಜೆಎನ್ಎಲ್ ಮೊದಲು ಆದ್ಯತೆ ನೀಡುತ್ತಿದೆ. ಹೊರ ಹರಿವು ಕಡಿಮೆ ಮಾಡಿದೆ. ಆರು ಘಟಕಗಳಿಂದ ಕಳೆದ ಒಂದು ವಾರದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಬಾಗಿನ ಅಪರ್ಣೆಗೆ ಸಿದ್ದತೆ: ಈಗಾಗಲೇ ಕೃಷ್ಣೆಗೆ ಆ ಭಾಗದ ರೈತ ಮುಖಂಡರು, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಬಾಗಿನ ಅರ್ಪಿಸಿದ್ದಾರೆ. ಇನ್ನೇನಿದ್ದರೂ ಸಂಪ್ರದಾಯಿಕವಾಗಿ ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಬೇಕಾಗಿದೆ. ಜಲಾಶಯ ಭರ್ತಿಯಾದ ಮೇಲೆ ಸಿಎಂ ಬಾಗಿನ ಅರ್ಪಿಸಲು ದಿನಾಂಕ ನಿಗದಿಯಾಗಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಅವರ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಇದೇ ಮೊದಲು ಪ್ರವಾಸವಾಗಬಹುದು.
ಪ್ರವಾಸಿಗರ ದಂಡು:ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಸೌಂದರ್ಯ ಸವಿಯಲು ನಿತ್ಯ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಕುಟುಂಬ ಸಮೇತ ಆಲಮಟ್ಟಿಗೆ ಆಗಮಿಸಿ, ಭೋರ್ಗೆಯುತ್ತಿರುವ ಕೃಷ್ಣೆ ಹಾಗೂ ಉದ್ಯಾನವನದ ಸೌಂದರ್ಯ ಸವಿಯುತ್ತಿದ್ದಾರೆ.
ಇದನ್ನೂ ಓದಿ:ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ: ನದಿ ಪಾತ್ರದ ಜನರಿಗೆ ಎಚ್ಚರಿಕೆ