ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿವಾದ: ಆರೋಪ ಸಾಬೀತು ಪಡಿಸಿದರೆ ರಾಜೀನಾಮೆ... ಎಂಎಲ್ಸಿ ಪೂಜಾರ ಸವಾಲು - ಈಟಿವಿ ಭಾರತ್ ಕನ್ನಡ ನ್ಯೂಸ್
ಬಾಗಲಕೋಟೆ: ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿವಾದ ಹಿನ್ನೆಲೆ ವಿನಾಕಾರಣ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು, ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೆ ನಾನು ವಿರೋಧ ಮಾಡಿಲ್ಲ. ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಿಲ್ಲಿಸುವಂತೆ ಯಾವುದೇ ಮಾಹಿತಿ ನೀಡಿಲ್ಲ. ನನ್ನ ಬಗ್ಗೆ ಏನಾದರೂ ದಾಖಲೆ ಕೊಡಲಿ ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಶಾಸಕರಿಗೆ ವಿಧಾನ ಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ಸವಾಲು ಹಾಕಿದ್ದಾರೆ.
ವಿನಾಕಾರಣ ನಾನು ಯಾವುದೇ ಹೇಳಿಕೆ ನೀಡಲ್ಲ. ಸಾರ್ವಜನಿಕ ವಲಯದಲ್ಲಿ ಮಾಜಿ ಶಾಸಕರು ಸುಳ್ಳು ಹೇಳುತ್ತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಪಕ್ಷದ ಸೋಲಿನ ಆತ್ಮಾವಲೋಕನ ಮಾಡಿಕೊಂಡು, ಮುಂಬರುವ ಲೋಕಸಭಾ ಚುನಾವಣೆ ಮತ್ತೆ ಸಂಘಟನೆ ಮಾಡುವುದು ಅಗತ್ಯವಿದೆ. ಆದರೆ ಇಂತಹ ಸುಳ್ಳು ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಇಲ್ಲಿ ನಡೆದಿರುವ ಎಲ್ಲ ವಿದ್ಯಮಾನಗಳ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿವುದು ಸರಿಯಲ್ಲ ಎಂದರು.
ಈ ವಿಚಾರದಿಂದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷಕ್ಕೆ ಡ್ಯಾಮೇಜ್ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪಿ.ಹೆಚ್.ಪೂಜಾರ, ಇದನ್ನು ಮಾಜಿ ಶಾಸಕರು ತಿಳಿದುಕೊಳ್ಳಬೇಕು. ಪಕ್ಷದ ಕಾರ್ಯಕರ್ತರ ಅರಿತು ಕೊಳ್ಳಬೇಕಾಗಿದೆ. ಲೋಕಸಭಾ ಚುನಾವಣೆ ಸ್ಥಳೀಯ ವಿಚಾರವಾಗಿ ಚರ್ಚೆಗೆ ಬರಲ್ಲ. ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು. ಹಿಂದೂ ಸಂಘಟನೆ ಮಾಡುವ ವಿಚಾರವಾಗಿ ಮೂಲ ಆರ್ಎಸ್ಎಸ್ನಿಂದ ಬಂದ ನನಗೆ ಸಮಗ್ರ ಮಾಹಿತಿ ಇದೆ. ಆದರೆ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ಯಾವಾಗಲೂ ವಿರೋಧ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಹೇಳಿರು.