ಯುವಕರ ಬೈಕ್ನತ್ತ ನುಗ್ಗಿದ ಕಾಡಾನೆ.. ಗಜರಾಜನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಕರ್ನಾಟಕದ ನಿವಾಸಿಗಳು!!
ವಯನಾಡ್, ಕೇರಳ:ಜಿಲ್ಲೆಯಲ್ಲಿ ಕರ್ನಾಟಕದ ಯುವಕರಿಬ್ಬರು ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆ. ವಯನಾಡ್ ವನ್ಯಜೀವಿ ಅಭಯಾರಣ್ಯದ ಮುತಂಗ - ಬಂಡಿಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಈ ದೃಶ್ಯ ಇವಾಗ ಎಲ್ಲೆಡೆ ವೈರಲ್ ಆಗ್ತಿದೆ.
ನಡೆದಿದ್ದೇನು?:ವಯನಾಡ್ ವನ್ಯಜೀವಿ ಅಭಯಾರಣ್ಯದ ಮುತಂಗ - ಬಂಡಿಪುರ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರಿಗೆ ರಸ್ತೆ ಬದಿ ಆನೆಯೊಂದು ಕಂಡಿದೆ. ಅವರು ಆನೆ ನೋಡಲು ಭರದಲ್ಲಿ ಬೈಕ್ ನಿಲ್ಲಿಸಲು ಮುಂದಾಗಿದ್ದಾರೆ. ಈ ವೇಳೆ, ಬೈಕ್ ಸ್ಕೀಡ್ ಆಗಿ ನೆಲಕ್ಕೆ ಬಿದ್ದಿದೆ. ಬೈಕ್ ಮೇಲೆತ್ತಿ ಸ್ಟಾರ್ಟ್ ಮಾಡುವಾಗ ಆನೆ ಬೈಕ್ ಸವಾರನ ಬಳಿ ನುಗ್ಗಿದೆ. ಅಷ್ಟೇ ಅಲ್ಲ ಆ ಬೈಕ್ ಮೇಲೆ ಆನೆ ದಾಳಿ ಮಾಡಿದೆ. ಇದನ್ನು ಕಂಡ ಸವಾರರಿಬ್ಬರು ಬೈಕ್ ಅನ್ನು ಕಾಡಿನಲ್ಲೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇನ್ನು ಈ ಬೈಕ್ನ ಹಿಂದಿನ ಕಾರಿನಲ್ಲಿದ್ದ ಮಲಪ್ಪುರಂ ಕೊಟ್ಟೈಕ್ಕಲ್ ನಿವಾಸಿ ನಾಸರ್ ಎಂಬಾತ ಈ ಸಂಪೂರ್ಣ ಘಟನೆಯ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಈ ಅರಣ್ಯ ಪ್ರದೇಶದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ಹಲವಾರು ಬಾರಿ ನಡೆದಿದ್ದವು. ಕೆಲ ದಿನಗಳ ಹಿಂದೆ ಯುವಕನೊಬ್ಬ ಹುಲಿ ದಾಳಿಯಿಂದ ಪಾರಾಗುವ ಆಘಾತಕಾರಿ ದೃಶ್ಯಗಳು ಹೊರಬಿದ್ದಿದ್ದವು. ರಸ್ತೆಯಲ್ಲಿ ವಾಹನ ನಿಲ್ಲಿಸಿ ಫೋಟೊ ತೆಗೆಯಲು ಮುಂದಾದಾಗ ಸವಾರನ ಮೇಲೆ ಹುಲಿ ದಾಳಿ ನಡೆಸಿತ್ತು. ಹುಲಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸವಾರನ ತಲೆಗೆ ಪೆಟ್ಟಾಗಿತ್ತು. ಬಳಿಕ ಹುಲಿ ಕೈಯಿಂದ ಪಾರಾಗಿದ್ದಾರೆ.