ಹುಲಿ - ಕರಡಿ ನಡುವೆ ಕಾದಾಟ: ಪ್ರವಾಸಿಗರ ಮೊಬೈಲ್ನಲ್ಲಿ ರೋಚಕ ದೃಶ್ಯ ಸೆರೆ - ಉತ್ತರಾಖಂಡದ ನೈನಿತಾಲ್ ಜಿಲ್ಲೆ
ರಾಮನಗರ (ಉತ್ತರಾಖಂಡ): ಹುಲಿ ಮತ್ತು ಕರಡಿ ಪರಸ್ಪರ ಮುಖಾಮುಖಿಯಾಗಿ ಕಾದಾಟದಲ್ಲಿ ತೊಡಗಿದ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಈ ಸೆಣಸಾಟದಲ್ಲಿ ಕರಡಿ ಪ್ರಾಣ ಕಳೆದುಕೊಂಡಿದೆ. ಎರಡು ಪ್ರಾಣಿಗಳ ನಡುವಿನ ಸಂಘರ್ಷದ ದೃಶ್ಯವನ್ನು ಪ್ರವಾಸಿಗರು ಸೆರೆಹಿಡಿದ್ದಾರೆ.
ಇಲ್ಲಿನ ರಾಮನಗರದಲ್ಲಿರುವ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೊದಲ ಬಾರಿಗೆ ಹುಲಿ ಮತ್ತು ಕರಡಿ ಕಾದಾಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಮಾರ್ಗದರ್ಶಿ ಸಂಜಯ್ ಚಿಮ್ವಾಲ್ ತಿಳಿಸಿದ್ದಾರೆ. ಸಫಾರಿಗೆ ಪ್ರವಾಸಿಗರನ್ನು ಕರೆದೊಯ್ದಾಗ ವನ್ಯಜೀವಿಗಳು ಕಾದಾಟದಲ್ಲಿ ತೊಡಗಿರುವುದು ಕಂಡು ಬಂತು. ಪ್ರವಾಸಿಗರು ಶಬ್ದ ಮಾಡಿದರೂ ಅವುಗಳ ತಮ್ಮ ಜಗಳ ನಿಲ್ಲಿಸಲಿಲ್ಲ. ಕೊನೆಗೆ ಈ ಹೋರಾಟದಲ್ಲಿ ಕರಡಿ ಮೃತಪಟ್ಟಿದೆ. ಇದರ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಕಾರ್ಬೆಟ್ ಪಾರ್ಕ್ ನಿರ್ದೇಶಕ ಡಾ.ಧೀರಜ್ ಪಾಂಡೆ ಪ್ರತಿಕ್ರಿಯಿಸಿದ್ದು, ಕರಡಿ ಮತ್ತು ಹುಲಿ ಕಾದಾಟದ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಈ ಅರಣ್ಯದಲ್ಲಿ ಇಂತಹ ವಿಡಿಯೋಗಳು ಕಾಣಿಸಿಕೊಳ್ಳುವುದು ಸಹಜ. ಹುಲಿ ಮತ್ತಿತರ ಪ್ರಾಣಿಗಳು ಮುಖಾಮುಖಿಯಾಗುವುದೂ ಸಾಮಾನ್ಯ. ಆದರೆ, ಪ್ರವಾಸಿಗರಿಗೆ ಇಂತಹ ದೃಶ್ಯ ಕಾಣಸಿಗುವುದು ಅಪರೂಪ. ಇದೊಂದು ರೋಚಕ ಮತ್ತು ವಿಭಿನ್ನ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮಾತೃ ಪ್ರೇಮ: ಹುಲಿ ಜೊತೆ ಹೋರಾಡಿ ಮರಿಗಳ ರಕ್ಷಿಸಿದ ತಾಯಿ ಕರಡಿ!