ಮುಂಗಾರು ಮಳೆ ವಿಳಂಬ: ನಾಳೆಯಿಂದ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಣೆ ಬಂದ್ - etv bharat kannada
ಶಿವಮೊಗ್ಗ:ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪ್ರತಿ ಬಾರಿಯಂತೆ ವರ್ಷದ ಜೂನ್ ತಿಂಗಳ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷೆಗಿಂತ ವಿಳಂಬವಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಸಿಗಂದೂರು ಲಾಂಚ್‌ನಲ್ಲಿ ವಾಹನ ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಜೂನ್ 14ರಿಂದ ಲಾಂಚ್‌ನಲ್ಲಿ ಬಸ್, ಕಾರು ಸೇರಿದಂತೆ ಇತರೆ ವಾಹನಗಳ ಸಾಗಣೆಯನ್ನು ನಿಲ್ಲಿಸಲಾಗುತ್ತಿದೆ.
ಅಂಬರಗೋಡ್ಲು– ಕಳಸವಳ್ಳಿಯ ಎರಡೂ ಬದಿಯಲ್ಲಿ ಪ್ಲಾಟ್ ಫಾರಂ ಮುಳುಗಿದೆ. ವಾಹನಗಳನ್ನು ಹತ್ತಿಸಿದರೆ ದಡದ ಕೆಸರಿನಲ್ಲಿ ಲಾಂಚ್ ಸಿಕ್ಕಿಹಾಕಿಕೊಳ್ಳಲಿದೆ. ಆದ್ದರಿಂದ ಜನರನ್ನು ಮಾತ್ರ ಲಾಂಚ್‌ಗೆ ಹತ್ತಿಸಿಕೊಳ್ಳಲಾಗುತ್ತದೆ. ಶರಾವತಿ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಆರಂಭವಾಗಿ ಚುರುಕುಗೊಳ್ಳದೇ ಇದ್ದರೆ ಲಾಂಚ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮುಂದೆ ಸ್ಥಳೀಯರ ಸಂಚಾರಕ್ಕೆ ಅನುಕೂಲವಾಗಲಿ ಎಂದು ಸಣ್ಣ ಲಾಂಚ್ ಮತ್ತು ಬೋಟ್ ಬಳಸಲು ಯೋಜಿಸಲಾಗಿದೆ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ