ಹುಲಿ ಚರ್ಮ ವಿನ್ಯಾಸದ ಶಾಲು ಹೊದ್ದು ವಾಟಾಳ್ ನಾಗರಾಜ್ ವಿಭಿನ್ನ ಪ್ರತಿಭಟನೆ- ವಿಡಿಯೋ - ಅರಣ್ಯ ಅಧಿಕಾರಿಗಳು
Published : Oct 26, 2023, 10:55 PM IST
ಬೆಂಗಳೂರು:ರಾಜ್ಯದಲ್ಲಿ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಹುಲಿ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ಗುರುವಾರ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಲ್ಲೇಶ್ವರದ ಅರಣ್ಯ ಭವನದ ಎದುರು ಪ್ರತಿಭಟನೆ ಮಾಡಿದರು. ಹುಲಿ ಚರ್ಮದಂತಿರುವ ಶಾಲು ಹೊದ್ದು ಪ್ರತಿಭಟಿಸಿ ಮಾತನಾಡಿದ ಅವರು, ವನ್ಯಜೀವಿಗಳ ಸಂರಕ್ಷಣೆ ಮಾಡುವುದರಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕೇವಲ ಹುಲಿ ಉಗುರು ಮಾತ್ರವಲ್ಲದೇ ಬೇರೆ ವನ್ಯಜೀವಿಗಳನ್ನು ಕೊಂದು ಅವುಗಳ ಚರ್ಮ ಹಾಗೂ ಆನೆ ದಂತ ಸೇರಿದಂತೆ ಅನೇಕ ವಸ್ತುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕೂಡಲೇ ಇದರ ಬಗ್ಗೆ ತೀವ್ರ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಒತ್ತಾಯಿಸಿದರು.
ಇನ್ನು ಗುರುವಾರವೂ ಕೂಡ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು ಜ್ಯೋತಿಷಿ ಆರ್ಯವರ್ದನ್, ಸಚಿವ ಬೈರತಿ ಸುರೇಶ್ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಧನಂಜಯ ಸ್ವಾಮೀಜಿ ಬಳಿ ಪತ್ತೆಯಾದ ಪೆಂಡೆಂಟ್ ವಶಪಡಿಸಿಕೊಳ್ಳಲಾಗಿದ್ದು, ಎಫ್ಎಸ್ಎಲ್ಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ತಿಳಿಸಿದ್ದಾರೆ.