ಅರಮನೆಯ ಸವಾರಿ ತೊಟ್ಟಿಯಲ್ಲಿ ರೋಚಕ ವಜ್ರಮುಷ್ಠಿ ಕಾಳಗ : ಏನಿದರ ಇತಿಹಾಸ ಗೊತ್ತಾ? - ಈಟಿವಿ ಭಾರತ ಕನ್ನಡ
Published : Oct 24, 2023, 1:42 PM IST
|Updated : Oct 24, 2023, 3:23 PM IST
ಮೈಸೂರು: ರಾಜ ವಂಶಸ್ಥರು ವಿಜಯಯಾತ್ರೆ ಹೊರಡುವ ಮುನ್ನ ಅರಮನೆಯ ಸವಾರಿ ತೊಟ್ಟಿಯಲ್ಲಿ ನಡೆದ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗದಲ್ಲಿ ಬೆಂಗಳೂರು, ಚಾಮರಾಜನಗರ ಹಾಗೂ ಮೈಸೂರು, ಚನ್ನಪಟ್ಟಣ ಜಟ್ಟಿಗಳು ಪರಸ್ಪರ ಸೆಣೆಸಾಡಿದರು. ಕೊನೆಗೆ ಬೆಂಗಳೂರು ಹಾಗೂ ಚನ್ನಪಟ್ಟಣ ಜಟ್ಟಿಗಳು ಸಾಂಪ್ರದಾಯಿಕ ವಿಜಯಶಾಲಿಗಳಾದರು.
ಅರಮನೆಯ ಸವಾರಿ ತೊಟ್ಟಿಯಲ್ಲಿ ರಾಜವಂಶಸ್ಥ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆ ಹೊರಡುವ ಮುನ್ನ ನಡೆದ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ ಹಾಗೂ ಚಾಮರಾಜನಗರದ ವೆಂಕಟೇಶ್ ಜಟ್ಟಿ ನಡುವೆ ನಡೆದ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ ಚಾಮರಾಜನಗರ ಜಟ್ಟಿ ಮೇಲೆ ಪ್ರಹಾರ ಮಾಡಿದರು. ಜೊತೆಗೆ ಚನ್ನಪಟ್ಟಣದ ಪ್ರವೀಣ್ ಜಟ್ಟಿಯಿಂದ ಮೈಸೂರಿನ ಪ್ರದೀಪ್ ಜಟ್ಟಿ ಪ್ರಹಾರಕ್ಕೆ ಒಳಗಾದರು.
ಈ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜಟ್ಟಿ, ಚನ್ನಪಟ್ಟಣದ ಪ್ರವೀಣ್ ಜಟ್ಟಿ ಪ್ರಹಾರ ಮಾಡಿ ವಿಜಯಿಯಾದರು. ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗವನ್ನು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಯಧುವೀರ್ ಒಡೆಯರ್ ಪತ್ನಿ ರಿಷಿಕಾ ಒಡೆಯರ್ ಹಾಗೂ ಮಗ ಆಧ್ಯವೀರ್ ಒಡೆಯರ್ ವೀಕ್ಷಣೆ ಮಾಡಿದರು. ಜಟ್ಟಿ ಕಾಳಗ ನೋಡಲು ಬಂದಿದ್ದ ಜನರು ರಾಜಮಾತೆಗೆ ಜೈಕಾರ ಹಾಕಿದರು.
ಇದನ್ನೂ ಓದಿ:ಅರಮನೆಯಲ್ಲಿ ರಾಜ ವಂಶಸ್ಥರಿಂದ ಸಾಂಪ್ರದಾಯಿಕ ವಿಜಯ ದಶಮಿ ಪೂಜೆ: ವಿಡಿಯೋ
ಜಟ್ಟಿ ಕಾಳಗದ ಇತಿಹಾಸ:ಜಟ್ಟಿ ಕಾಳಗಕ್ಕೆ ವಜ್ರಮುಷ್ಠಿ ಕಾಳಗ ಎನ್ನಲಾಗುತ್ತದೆ. ಜಟ್ಟಿಗಳು ನಡೆಸಿಕೊಡುವ ವಜ್ರಮುಷ್ಠಿ ಕಾಳಗ ಮಹಾಭಾರತದ ಕೃಷ್ಣನ ಕಾಲದಿಂದಲೂ ಇದೆ. ಈಗಲೂ ಅದನ್ನು ರಾಜವಂಶಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಶರನ್ನವರಾತ್ರಿಯ ವಿಜಯದಶಮಿಯ ದಿನ ವಿಜಯಯಾತ್ರೆಗೆ ಮುಂಚೆ ಅರಮನೆಯ ಆನೆ ಬಾಗಿಲಿನ ಮೂಲಕ ಹೋಗಿ ಒಳಗಿರುವ ಕನ್ನಡಿ ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗವನ್ನು ಏರ್ಪಾಡು ಮಾಡಲಾಗುತ್ತಿದೆ. ವಜ್ರಮುಷ್ಠಿ ಕಾಳಗದಲ್ಲಿ ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು ಕಾಳಗ ನಡೆಸುವರು.
ಜಟ್ಟಿಗಳು ಯಾರು?: ಇತಿಹಾಸ ಕಾಲದಿಂದ ಜಟ್ಟಿ ಜನಾಂಗದವರು ರಾಜ ಮನೆತನದಲ್ಲಿ ವಜ್ರಮುಷ್ಟಿ ಕಾಳಗ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಾಸವಿರುವ ಜಟ್ಟಿ ಜನಾಂಗದವರು ಒಂದೊಂದು ಪ್ರದೇಶದಿಂದ ಇಬ್ಬರು ಜಟ್ಟಿಗಳನ್ನು ಆಯ್ಕೆ ಮಾಡಿ ಮಹಾರಾಣಿ ಹಾಗೂ ಮಹಾರಾಜರ ಮುಂದೆ ತಂದು ನಿಲ್ಲಿಸುತ್ತಾರೆ.
ಆಗ ಮಹಾರಾಣಿಯವರು ಈ ಬಾರಿ ಜಟ್ಟಿ ಕಾಳಗದಲ್ಲಿ ಭಾಗವಹಿಸುವ ಎರಡು ಜೋಡಿಯನ್ನು ಆಯ್ಕೆ ಮಾಡಿ ಜಟ್ಟಿ ಕಾಳಗ ನಡೆಸುವ ಗುರುಗಳಿಗೆ ಸೂಚಿಸುತ್ತಾರೆ. ಬಳಿಕ ವಜ್ರಮುಷ್ಠಿ ಕಾಳಗ ರಾಜ ಪರಂಪರೆಯಂತೆ ಸಾಗುತ್ತದೆ. ವಜ್ರಮುಷ್ಠಿ ಕಾಳಗಕ್ಕೆ ಆಯ್ಕೆಯಾದ ನಾಲ್ಕು ಜೋಡಿಗಳಿಗೆ 45 ದಿನಗಳಿಗೆ ಮುಂಚೆ ತರಬೇತಿ ನೀಡಲಾಗುತ್ತದೆ. ಜಟ್ಟಿಗಳು ಶ್ರದ್ಧಾಭಕ್ತಿಯಿಂದ ಹಾಗೂ ಸಸ್ಯಹಾರಿ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು.
ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಠಿ ಕಾಳಗಕಕ್ಕೆ ಕೊನೆ:ವಿಜಯದಶಮಿಯಂದು ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಜಟ್ಟಿಗಳು ಭಾಗವಹಿಸುವರು. ವಿಜಯ ಯಾತ್ರೆ ಹೊರಡುವ ಮುನ್ನ ರಾಜರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ರಾಜರಿಗೆ ನಮಸ್ಕರಿಸಿ ಕೆಲವೇ ಸೆಕೆಂಡುಗಳಲ್ಲಿ ಎರಡು ಜೋಡಿ ಜಟ್ಟಿಗಳು ಕೈ ಬೆರಳುಗಳಲ್ಲಿ ಧರಿಸಿರುವ ಕಾಡಿನ ಕೋಣದ ಕೊಂಬಿನ ಆಯುಧದಿಂದ ಪೈಪೋಟಿ ನಡೆಸುವರು. ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಠಿ ಕಾಳಗ ಕೊನೆಗೊಳ್ಳುತ್ತದೆ. ಈ ಕಾಳಗದಲ್ಲಿ ರಕ್ತ ಚಿಮ್ಮಿದ ಜಟ್ಟಿಗಳು ರಾಜರಿಗೆ ನಮಸ್ಕರಿಸಿದ ಬಳಿಕ ರಾಜರು ಅರಮನೆಯಿಂದ ವಿಜಯ ಯಾತ್ರೆ ನಡೆಸಿ ಬನ್ನಿ ಪೂಜೆ ಸಲ್ಲಿಸಿ ವಾಪಸ್ ಅರಮನೆಗೆ ಆಗಮಿಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವರು.