ಕಾರವಾರ: ಕೊಂಕಣ ರೈಲ್ವೆ ಯೋಜನೆಯಲ್ಲಿ ಜಮೀನು ಕಳೆದುಕೊಂಡ ನಿರಾಶ್ರಿತರಿಂದ ಪರಿಹಾರಕ್ಕೆ ಒತ್ತಾಯ - ಭೂಸ್ವಾಧೀನಾಧಿಕಾರಿ
Published : Dec 23, 2023, 10:45 PM IST
ಕಾರವಾರ: ಕೇಂದ್ರದ ಕೊಂಕಣ ರೈಲ್ವೆ ಯೋಜನೆಗೆ ಜಮೀನು ಕಳೆದುಕೊಂಡ ಅಂಕೋಲಾ ತಾಲೂಕಿನ ಹಾರವಾಡ, ಸಕಲಬೇಣ, ಆವರ್ಸಾ ಭಾಗದ ರೈತರು ಶೀಘ್ರ ಹೆಚ್ಚುವರಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
30 ವರ್ಷಗಳ ಹಿಂದೆ ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ವ್ಯಾಪ್ತಿ ಕೊಂಕಣ ರೈಲ್ವೆ ನೂತನ ಮಾರ್ಗಕ್ಕಾಗಿ ಅಂಕೋಲಾ ತಾಲೂಕಿನ ಹಾರವಾಡ, ಸಕಲಬೇಣ, ಆವರ್ಸಾ ಭಾಗದ ರೈತರ ನೂರಾರು ಎಕರೆ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿತ್ತು. ಪ್ರತಿ ಗುಂಟೆಗೆ ಕೇವಲ 400 ರಿಂದ 1000 ರೂಪಾಯಿ ನಿಗದಿಪಡಿಸಿದ ಭೂಸ್ವಾಧೀನಾಧಿಕಾರಿಗಳು ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದರು.
ಈ ವೇಳೆ ಕೆಲ ಭೂಮಾಲೀಕರು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ, ಭೂಸ್ವಾಧೀನ ಕಾಯ್ದೆ 18ರಡಿ ಅರ್ಜಿ ಸಲ್ಲಿಸಿ ಹೆಚ್ಚುವರಿ ಪರಿಹಾರ ಪಡೆದುಕೊಂಡಿದ್ದರು. ಪರಿಹಾರ ಸಿಗದ ಕೆಲ ಅನಕ್ಷರಸ್ಥ ರೈತರು ಜಿಲ್ಲಾಧಿಕಾರಿ ಮೊರೆ ಹೋಗಿ, 28(ಎ) ಅನ್ವಯ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕೊಂಕಣ ರೈಲ್ವೆ ಕುಮಟಾದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಾರ್ಯಾಲಯದಲ್ಲಿ ಸಾಕಷ್ಟು ಬಾರಿ ವಿಚಾರಣೆ ನಡೆಸಿದರೂ, ಇದುವರೆಗೆ ಬಹಳಷ್ಟು ರೈತರಿಗೆ ಪರಿಹಾರ ಕೈಸೇರಿಲ್ಲ.
ಕೊಂಕಣ ರೈಲ್ವೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರು ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಇತ್ತ ಭೂಮಿಯೂ ಇಲ್ಲ, ಅತ್ತ ಪರಿಹಾರವೂ ಇಲ್ಲ ಎನ್ನುವಂತಾಗಿದೆ. ಈಗಾಗಲೇ ಪರಿಹಾರಕ್ಕಾಗಿ ಅಲೆದಾಡಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಇದೀಗ ಇರುವವರೆಲ್ಲ ಹಲವರು ವಯಸ್ಸಾದವರು ಇರುವುದರಿಂದ ಪ್ರತಿ ಬಾರಿ ವಿಚಾರಣೆಗೆ ಕುಮಟಾಕ್ಕೆ ತೆರಳಲಾಗದೇ ಪರದಾಡುವಂತಾಗಿದೆ.
2019ರಲ್ಲಿ ಅಂದಿನ ಕೊಂಕಣ ರೈಲ್ವೆ ಭೂಸ್ವಾಧೀನಾಧಿಕಾರಿಗಳು ಪರಿಹಾರಕ್ಕೆ ಒಪ್ಪಿದ್ದರು. ಇನ್ನೇನು ಅಂತಿಮಗೊಳಿಸುವಷ್ಟರಲ್ಲಿ ಕೊರೊನಾ ವಕ್ಕರಿಸಿ ಪರಿಹಾರ ಮತ್ತೆ ವಿಳಂಬವಾಗಿದೆ. ಮೇಲಿಂದ ಮೇಲೆ ಅಧಿಕಾರಿಗಳು ವರ್ಗಾವಣೆಗೊಂಡು ಹೋಗುವರು.ಪ್ರತಿ ಬಾರಿ ಹೊಸ ಅಧಿಕಾರಿ ಬಂದಾಗಲೂ ದಾಖಲೆಗಳನ್ನು ನೀಡಬೇಕಾಗಿದೆ. ಹೀಗಾಗಿ ಅಧಿಕಾರಿಗಳು ಇತ್ತ ಗಮನಹರಿಸಿ ಆದಷ್ಟು ಬೇಗ ಪರಿಹಾರ ಒದಗಿಸಿಕೊಡಬೇಕೆಂದು ಭೂಮಿ ಕಳೆದುಕೊಂಡ ನಿರಾಶ್ರಿತರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಬೆಳೆ ಹಾನಿ: ನಷ್ಟ ಪರಿಹಾರ ನೀಡುವಂತೆ ರೈತರ ಒತ್ತಾಯ