ಚಾರ್‌ಧಾಮ್ ಭೇಟಿಗೆ ಯಾತ್ರಿಕರ ನೋಂದಣಿ ಕಡ್ಡಾಯ: ಉತ್ತರಾಖಂಡ ಸರ್ಕಾರ
ಪೌರಿ (ಉತ್ತರಾಖಂಡ):ಮುಂದಿನ ತಿಂಗಳಿನಿಂದ ಆರಂಭವಾಗುವ ಚಾರ್‌ಧಾಮ್ ಯಾತ್ರೆಗೆ ಯಾತ್ರಾರ್ಥಿಗಳ ನೋಂದಣಿ ಕಡ್ಡಾಯ ಮಾಡಲಾಗಿದೆ. ಮೊದಲು ಕೇದಾರನಾಥ, ಬದರಿನಾಥಕ್ಕೆ ಮಾತ್ರ ನೋಂದಣಿ ಮಾಡಿಕೊಳ್ಳಲಾಗುತ್ತಿತ್ತು. ಈ ಬಾರಿ 4 ಧಾಮಕ್ಕೂ ಭೇಟಿ ನೀಡುವ ಯಾತ್ರಾರ್ಥಿಗಳು ಮುಂಚಿತವಾಗಿ ತಮ್ಮ ಹೆಸರು ನೀಡಬೇಕು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಏಪ್ರಿಲ್ 22 ರಿಂದ ಚಾರ್‌ಧಾಮ್ ಯಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಸಿದ್ಧತೆ ಪ್ರಾರಂಭಿಸಿವೆ. ಯಾತ್ರೆಯಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆಯ ಮೇಲೆ ನಿಗಾ ಇಡಲು ನೋಂದಣಿ ಕಡ್ಡಾಯಗೊಳಿಸಲಾಗಿದೆ. ಕೇದಾರನಾಥ ಮತ್ತು ಬದರಿನಾಥಕ್ಕೆ ಮಾಡಿಸುವ ನೋಂದಣಿಯಂತೆ ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೂ ಭೇಟಿ ನೀಡುವ ಜನರು ಕಡ್ಡಾಯವಾಗಿ ಹೆಸರು ನೀಡಬೇಕು ಎಂದು ಗರ್ವಾಲ್ ಜಿಲ್ಲಾಧಿಕಾರಿ ಸುಶೀಲ್ ಕುಮಾರ್ ತಿಳಿಸಿದ್ದಾರೆ.
ಈ ಹಿಂದೆ ಬದರಿನಾಥ್ ಮತ್ತು ಕೇದಾರನಾಥ ಧಾಮಗಳಿಗೆ ಮಾತ್ರ ಪ್ರಯಾಣಿಕರ ನೋಂದಣಿ ಮಾಡಲಾಗುತ್ತಿತ್ತು. ಯಾತ್ರೆಯ ಮಾರ್ಗದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ದೇಗುಲಗಳಿಗೆ ತೆರಳುವ ಪಾದಚಾರಿ ಮಾರ್ಗಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರಯಾಣದ ಮಾರ್ಗಗಳಲ್ಲಿ ಆರೋಗ್ಯ ಕೇಂದ್ರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗುವುದು. ಯಾತ್ರೆ ಹೋಗುವ ಮಾರ್ಗಗಳಲ್ಲಿ ಸ್ವಚ್ಛತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಧಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ನಗರ ಪಂಚಾಯಿತಿ, ಪುರಸಭೆ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ:ಸಿನಿಮಾ ದೃಶ್ಯದಂತೆ ಚಲಿಸುತ್ತಿರುವ ಕಾರಿನಿಂದ ಹಣ ಎಸೆದ ಯುವಕ: ವಿಡಿಯೋ