ಪ್ರಧಾನಿ ಮೋದಿಯೊಂದಿಗೆ ಸೆಲ್ಫಿ, ಆಟೋಗ್ರಾಫ್ಗಾಗಿ ಸಾಲುಗಟ್ಟಿನಿಂತ ಕಾಂಗ್ರೆಸ್ಸಿಗರು! - ಈಟಿವಿ ಭಾರತ ಕನ್ನಡ
ವಾಷಿಂಗ್ಟನ್ ಡಿಸಿ (ಅಮೆರಿಕ):ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ, ಪ್ರಧಾನಿ ಮೋದಿ ಅಮೆರಿಕ ಮತ್ತು ಭಾರತದ ಸಂಬಂಧ, ವ್ಯವಹಾರ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ಭಾಷಣದ ನಂತರ ಅಮೆರಿಕ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿ ಅವರೊಂದಿಗೆ ಆಟೋಗ್ರಾಫ್ ಮತ್ತು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು.
ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ:ಅಮೆರಿಕ ಸಂಸತ್ತಿನಲ್ಲಿ ಎರಡನೇ ಬಾರಿ ಭಾಷಣ ಮಾಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಅಮೆರಿಕ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರು ಸುಮಾರು 58 ನಿಮಿಷಗಳ ಭಾಷಣ ಮಾಡಿದ್ದಾರೆ. ಇಲ್ಲಿಯವರೆಗೆ ಯಾವೊಬ್ಬ ಭಾರತೀಯ ಪ್ರಧಾನಿಯೂ ಅಮೆರಿಕದ ಸಂಸತ್ತಿನಲ್ಲಿ ಎರಡು ಬಾರಿ ಭಾಷಣ ಮಾಡಿರಲಿಲ್ಲ. ವಿಶ್ವದ ಕೆಲವೇ ಆಯ್ದ ನಾಯಕರು ಅಮೆರಿಕ ಸಂಸತ್ತಿನಲ್ಲಿ ಎರಡು ಬಾರಿ ಭಾಷಣ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ಮೋದಿ ಎರಡು ಬಾರಿ ಭಾಷಣ ಮಾಡಿದ ಮೊದಲ ಭಾರತೀಯರಾಗಿದ್ದಾರೆ.
ಮೂರು ಬಾರಿ ಭಾಷಣ ಮಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಅಮೆರಿಕ ಸಂಸತ್ತಿನಲ್ಲಿ ಎರಡು ಬಾರಿ ಭಾಷಣ ಮಾಡಿದ ವಿಶ್ವದ ಕೆಲವೇ ನಾಯಕರಲ್ಲಿ ಸೇರಿದ್ದಾರೆ.
2016 ರಲ್ಲಿ ಪ್ರಧಾನಿ ಮೊದಲ ಭಾಷಣ:ಈ ಹಿಂದೆ, ಪ್ರಧಾನಿ ಮೋದಿ ಅವರು ಜೂನ್ 2016ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ್ದರು. ಅವರಿಗಿಂತ ಮೊದಲು, ಪ್ರಧಾನಿ ಮನಮೋಹನ್ ಸಿಂಗ್ ಅವರು 19 ಜುಲೈ 2005, 14 ಸೆಪ್ಟೆಂಬರ್ 2000 ರಂದು ಅಟಲ್ ಬಿಹಾರಿ ವಾಜಪೇಯಿ, 18 ಮೇ 1994 ರಂದು ಪಿವಿ ನರಸಿಂಹ ರಾವ್ ಮತ್ತು 13 ಜುಲೈ 1985 ರಂದು ರಾಜೀವ್ ಗಾಂಧಿ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದರು.