ಹುಡುಗಿಯಲ್ಲ! ಅತಿ ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಹುಡುಗ: ವಿಡಿಯೋ ನೋಡಿ - ಉತ್ತರ ಪ್ರದೇಶ ನ್ಯೂಸ್
Published : Sep 20, 2023, 12:20 PM IST
ನೋಯ್ಡಾ (ಉತ್ತರ ಪ್ರದೇಶ):ಅತಿ ಉದ್ದನೆಯ ಕೂದಲು ಬೆಳೆಸುವ ಮೂಲಕ ಭಾರತೀಯ ಬಾಲಕನೋರ್ವ ಗಿನ್ನಿಸ್ ದಾಖಲೆ ಬರೆದಿದ್ದಾನೆ. ಉತ್ತರ ಪ್ರದೇಶ ಮೂಲದ ಸಿದ್ದಕ್ದೀಪ್ ಸಿಂಗ್ ಚಹಲ್ ಈ ವಿಶಿಷ್ಟ ಸಾಧನೆ ಮಾಡಿದವರು. ಇವರ ಸಾಧನೆಯ ವಿಡಿಯೋವನ್ನು 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದೆ. ಸುಮಾರು 4 ಅಡಿ 9.5 ಇಂಚು ಉದ್ದ ಕೂದಲು ಬೆಳೆದಿದ್ದು, ಸಿದ್ದಕ್ದೀಪ್ ಸಿಂಗ್ ಕೇಶವನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿದ್ದಕ್ದೀಪ್ ಸಿಂಗ್, "ಜನರು ನನ್ನ ಕೂದಲನ್ನು ನೋಡಿ ತುಂಬಾ ಉದ್ದ ಹಾಗೂ ದಟ್ಟವಾಗಿದೆ ಎಂದು ಹೇಳುತ್ತಾರೆ. ಹಲವರು ನನ್ನ ಬಳಿ ಬಂದು ನಮಗೆ ಈ ರೀತಿಯ ಕೂದಲು ಬೆಳೆಯಬೇಕಿತ್ತು ಎಂದು ಆಸೆ ವ್ಯಕ್ತಪಡಿಸುತ್ತಾರೆ. ನನ್ನ ಕೂದಲು ಸುಮಾರು 130 ಸೆಂ.ಮೀ ಅಥವಾ 4 ಅಡಿ ಉದ್ದ ಇರಬಹುದು" ಎಂದರು.
"ಸಿಖ್ ಧರ್ಮವನ್ನು ಅನುಸರಿಸುವ ನಾನು ನನ್ನ ಕೂದಲನ್ನು ಕತ್ತರಿಸದೆ ಹಾಗೆಯೇ ಬಿಟ್ಟಿದ್ದೇನೆ. ಎಂದಿಗೂ ನನಗೆ ಕೂದಲನ್ನೂ ಕತ್ತರಿಸಿಕೊಳ್ಳಬೇಕೆಂಬ ಆಲೋಚನೆಯೇ ಬಂದಿಲ್ಲ. ದಿನದಿನಕ್ಕೆ ಕೂದಲು ಹೆಚ್ಚಾಗಿ ಬೆಳೆಯುತ್ತಾ ಹೋದಂತೆ ನಾನು ಕತ್ತರಿಸದೆ ಹಾಗೆಯೇ ಬಿಟ್ಟೆ. ಈಗ ಅದು ಗಿನ್ನಿಸ್ ದಾಖಲೆಯಾಗಿರುವುದು ತುಂಬಾ ಸಂತಸವಾಗಿದೆ. ನನಗೆ ಕೂದಲನ್ನು ತೊಳೆದು, ಒಣಗಿಸಿ ಕಟ್ಟಿಕೊಳ್ಳಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಇದನ್ನೆಲ್ಲ ನನ್ನ ತಾಯಿ ಮಾಡುತ್ತಾರೆ. ಅವರಿಗೆ ಈ ಗೌರವ ಸಲ್ಲಬೇಕು. ಕೂದಲನ್ನು ಈ ರೀತಿ ಕಾಪಾಡಿಕೊಳ್ಳುವುದು ಕಠಿಣ ಕೆಲಸವಾದರೂ ಅದಕ್ಕೆ ತಕ್ಕ ಗೌರವ ಸಿಕ್ಕಿದೆ" ಎಂದು ಸಿದ್ದಕ್ದೀಪ್ ಸಿಂಗ್ ಚಹಲ್ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸತತ 26 ಗಂಟೆಗಳ ಕಾಲ ಸ್ಯಾಕ್ಸೋಫೋನ್ ನುಡಿಸಿ ಗಿನ್ನಿಸ್ ದಾಖಲೆ ಬರೆದ ಗರ್ಭಿಣಿ!