ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಗೆ ರೈತರಿಂದ ಮುತ್ತಿಗೆ... - union minister office besieged by farmers
Published : Sep 4, 2023, 5:21 PM IST
ಹುಬ್ಬಳ್ಳಿ:ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸದಸ್ಯರು ಇಲ್ಲಿನ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿನ ಕೇಂದ್ರ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯದಲ್ಲಿ ಬರಗಾಲ ಸೃಷ್ಟಿಯಾಗಿದ್ದರೂ ಕಾವೇರಿಕೊಳ್ಳದ ಜಲಾಶಯಗಳ ನೀರು ಖಾಲಿಯಾಗುತ್ತಿದೆ. ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಗಂಭೀರವಾಗಿ ಚಿಂತನೆ ನಡೆಯುತ್ತಿಲ್ಲ. ಈ ಬಗ್ಗೆ ರಾಜ್ಯದ ಧ್ವನಿಯಾಗಬೇಕಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುಮ್ಮನಿರುವುದು ಖಂಡನೀಯ ಎಂದಿದ್ದಾರೆ.
ಈಗಾಗಲೇ ಕಬಿನಿ, ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನು ಬಲಿಕೊಡಲಾಗಿದೆ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಬೇಕು. ಮೇಕೆದಾಟು ಜಲಾಶಯ ಯೋಜನೆ ಕೈಬಿಡಬೇಕು. ಮಹದಾಯಿ ನದಿ ನೀರಿನ ವಿವಾದ ಕೂಡಲೇ ಬಗೆಹರಿಸಿ ಯೋಜನೆ ಪೂರ್ಣಗೊಳಿಸಿ ಅಚ್ಚುಕಟ್ಟು ಭಾಗದ ನೀರಿನ ಸಮಸ್ಯೆ ಬಗೆಹರಿಸಬೇಕು. ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ ಹೆಚ್ಚುವರಿ ಬಾಕಿ ಹಣ ಬಿಡುಗಡೆ ಮಾಡಬೇಕು.
ರಾಜ್ಯ ಬಜೆಟ್ನಲ್ಲಿ ಕೃಷಿಗೆ ಅನುದಾನ ಕಡಿತ ಮಾಡಿರುವುದನ್ನು ತಾವುಗಳು ವಿರೋಧಿಸಬೇಕು. ಕೇಂದ್ರ ಸರ್ಕಾರದ ಅಕ್ಕಿ, ಸಕ್ಕರೆ, ಈರುಳ್ಳಿ ರಪ್ತು ನಿಷೇಧ ಖಂಡನೀಯ, ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಣೆ ಮಾಡಬೇಕು, ಬ್ಯಾಂಕುಗಳ ಕೃಷಿ ಸಾಲ ನೀಡುವಾಗ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಇಲ್ಲವಾದರೇ ಪ್ರಜಾ ಆಂದೋಲನ ನಡೆಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಉಳವಪ್ಪ ಬಳಿಗೇರ್, ವಾಸು ಡಾಕ್ಕಪ್ಪನವರ, ಬಸನಗೌಡ ಸಿದ್ದನಗೌಡ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮೇಕೆದಾಟು ಯೋಜನೆಯೊಂದೇ ಕಾವೇರಿ ನದಿ ನೀರು ಸಮಸ್ಯೆಗೆ ಪರಿಹಾರ: ಡಿಸಿಎಂ ಡಿ.ಕೆ.ಶಿವಕುಮಾರ್