Boat tragedy: ಬೋಟ್ ಮುಳುಗಿ ಒಂದೇ ಕುಟುಂಬದ ಇಬ್ಬರು ಸಾವು.. ದೋಣಿ ಮುಳುಗಲು ಕಾರಣವಾಯ್ತು ಒಂದು ಸಣ್ಣ ರಂಧ್ರ - ಉದಯನಪುರಂ ಕೊಡಿಯಾಡು ಪುತ್ತಂತರ ಶರತ್
ಕೊಟ್ಟಾಯಂ (ಕೇರಳ): ಚಿಕ್ಕ ದೋಣಿ ಮುಳುಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ವೈಕಂನ ತಲಯಾಝಂ ಚೆಟ್ಟಿಕ್ಕರಿ ಪ್ರದೇಶದಲ್ಲಿ ನಡೆದಿದೆ. ಒಂದೇ ಕುಟುಂಬದ ಆರು ಮಂದಿ ಪ್ರಯಾಣಿಸುತ್ತಿದ್ದ ದೋಣಿ ಬುಧವಾರ (ಜೂನ್ 21) ಮಗುಚಿ ಬಿದ್ದಿದೆ. ಮೃತರನ್ನು ಉದಯನಪುರಂ ಕೊಡಿಯಾಡು ಪುತ್ತಂತರ ಶರತ್ (33) ಮತ್ತು ಅವರ ಸೋದರಳಿಯ ಐವಾನ್ (4) ಎಂದು ಗುರುತಿಸಲಾಗಿದೆ.
ವೈಕಂ ಅಗ್ನಿಶಾಮಕ ದಳದವರು ಶರತ್ ಅವರನ್ನು ತಾಲೂಕು ಆಸ್ಪತ್ರೆಗೆ ಕರೆದೊಯ್ದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಬಾಲಕ ಐವಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಉಳಿದ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬದ ಸದಸ್ಯರೆಲ್ಲರೂ ಚಿಕ್ಕ ದೋಣಿಯಲ್ಲಿ ಶವಸಂಸ್ಕಾರಕ್ಕೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.
ಶರತ್‌ನ ತಂದೆ, ತಾಯಿ, ಸಹೋದರಿ ಮತ್ತು ಸಹೋದರಿಯ ಇಬ್ಬರು ಮಕ್ಕಳು ದೋಣಿಯಲ್ಲಿದ್ದರು. ಅದರಲ್ಲಿ ಒಬ್ಬ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ದೋಣಿಯಲ್ಲಿ ರಂಧ್ರವಿದ್ದು, ರಂಧ್ರದ ಮೂಲಕ ನೀರು ನುಗ್ಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಇದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಶರತ್ ಹಾಗೂ ಐವಾನ್ನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:Viral video: ಉಳ್ಳಾಲದಲ್ಲಿ ಪವಾಡ ಸದೃಶ್ಯ ರೀತಿ ಮಹಿಳೆ ಪಾರು