ಕಾಡುಹಂದಿ ಮಾಂಸ ಅಂತಾ ಊರ ಹಂದಿ ಮಾಂಸ ತಿನ್ನಿಸಿದ ಯುವಕರು.. ಗ್ರಾಮಸ್ಥರಿಂದ ಗೂಸಾ - ಈಟಿವಿ ಭಾರತ ಕನ್ನಡ
ಕಾರವಾರ: ಕಾಡುಹಂದಿ ಮಾಂಸ ಎಂದು ನಂಬಿಸಿ ಊರು ಹಂದಿ ಹಾಗೂ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಅಂಕೋಲಾ ತಾಲ್ಲೂಕಿನ ಮೊಗಟಾದಲ್ಲಿ ನಡೆದಿದೆ. ತಾಲ್ಲೂಕಿನ ಮೊಗಟಾ ಹಾಗೂ ಹಿಲ್ಲೂರು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಡು ಹಂದಿ ಮಾಂಸ ಎಂದು ಊರ ಹಂದಿ ಹಾಗೂ ನಾಯಿ ಮಾಂಸವನ್ನು ಕೆಲ ಯುವಕರು ಮಾರಾಟ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿನ ಮಾಂಸ ಪ್ರಿಯರನ್ನು ಟಾರ್ಗೆಟ್ ಮಾಡಿ ಸಂಪರ್ಕ ಮಾಡುತ್ತಿದ್ದ ಯುವಕರು ಮನೆಗಳಿಗೆ ಕೊಂಡೊಯ್ದು ಮಾಂಸ ಮಾರಾಟ ಮಾಡುತ್ತಿದ್ದರಂತೆ. ಆದರೆ ಹೀಗೆ ನೀಡುತ್ತಿರುವುದು ಕಾಡು ಹಂದಿ ಮಾಂಸ ಅಲ್ಲ, ಎಂಬುದನ್ನು ತಿಳಿದ ಜನರು ಕೂಡಲೇ ಮತ್ತೊಂದಿಷ್ಟು ಮಾಂಸ ಬೇಕೆಂದು ಯುವಕರನ್ನು ಕರೆಯಿಸಿ ಥಳಿಸಿದ್ದಾರೆ. ಅಲ್ಲದೆ ಯುವಕರಿಗೆ ಈವರೆಗೆ ಪಡೆದ ಹಣವನ್ನು ವಾಪಸ್ ಮರಳಿಸುವಂತೆ ಆಗ್ರಹಿಸಿ ಗೂಸಾ ನೀಡಿದ್ದಾರೆ. ಇನ್ನು, ಯುವಕರು ನಾಯಿಗಳನ್ನು ಹಿಡಿಯುತ್ತಿದ್ದ ಆರೋಪ ಕೇಳಿಬಂದಿದ್ದು, ಇದನ್ನು ಮಾಂಸ ಮಾಡಿ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಲೆಮಾರಿ ಜನಾಂಗದ ಯುವಕರಾಗಿದ್ದು, ಇಬ್ಬರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ:ತುಮಕೂರು: ಗಾಯಗೊಂಡು ನರಳಾಡುತ್ತಿದ್ದ ಗೂಬೆಯ ರಕ್ಷಣೆ