ಮಳೆಯಿಂದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ.. ವೀಕ್ಷಣೆಗೆ ಹರಿದು ಬರುತ್ತಿದೆ ಪ್ರವಾಸಿಗರ ದಂಡು
ಕೊಪ್ಪಳ: ಕರ್ನಾಟಕ, ಆಂಧ್ರ, ತೆಲಂಗಾಣ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ನೋಡಲು ಪ್ರವಾಸಿಗರು ದಂಡು ದಂಡಾಗಿ ಹರಿದು ಬರುತ್ತಿದ್ದಾರೆ. ಈ ಬಾರಿ ಮುಂಗಾರು ವಿಳಂಬವಾಗಿದೆ. ಆದ್ರೆ ಕೆಲವು ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದಾಗಿ ಜಲಾಶಯಕ್ಕೆ ಜೀವಕಳೆ ಬಂದಿದೆ.
ತುಂಗಭದ್ರಾ ಜಲಾಶಯ ಈಗ ಸೆಲ್ಫಿ ಸ್ಪಾಟ್: ನಿತ್ಯ ಒಂದು ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದು ಸೇರುತ್ತಿದೆ. ಇದರಿಂದಾಗಿ ಕಳೆದ 15 ದಿನಗಳಲ್ಲಿ ಜಲಾಶಯಕ್ಕೆ ಬರೋಬ್ಬರಿ 71 ಟಿಎಂಸಿ ನೀರು ಸಂಗ್ರಹವಾಗಿದೆ. ಬಹಳ ದಿನಗಳ ನಂತರ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಆಗುತ್ತಿದೆ. ಜಲಾಶಯ ವೀಕ್ಷಣೆಗೆ ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರು ಜಲಾಶಯ ಮೇಲೆ ನಿಂತು ಫೋಟೋ, ನೀರಿನ ತೆರೆಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಈಗ ತುಂಗಭದ್ರಾ ಸೆಲ್ಫಿ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಪ್ರವಾಸಿಗರಿಗೆ ಬೇಕಿದೆ ಸುರಕ್ಷೆ: ಇತ್ತೀಚೆಗೆ ಉಡುಪಿಯಲ್ಲಿ ಫೋಟೋ ಕ್ಲಿಕ್ಕಿಸಲು ಹೋಗಿ ಯುವಕ ನಾಪತ್ತೆಯಾಗಿರುವ ಘಟನೆ ಇನ್ನೂ ಮಾಸಿಲ್ಲ. ಆದರೆ ತುಂಗಭದ್ರಾ ಜಲಾಶಯಕ್ಕೆ ಬಂದವರು ನೀರಿಗಿಳಿದು ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಿದ್ದಾರೆ. ಜಲಾಶಯದ ದಡದಲ್ಲಿ ನಿಷೇಧಿತ ಪ್ರದೇಶವೆಂದು ಬೋರ್ಡ್ ಹಾಕಿದ್ದರೂ ಜನರು ಕೇಳುತ್ತಿಲ್ಲ. ನಿಯಂತ್ರಿಸಬೇಕಾದ ಪೊಲೀಸರು ಇತ್ತ ಸುಳಿದಿಲ್ಲ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ನಿಯಂತ್ರಣ ಅಗತ್ಯವಿದೆ.
ಭತ್ತ ನಾಟಿಗೆ ಸಿದ್ಧತೆ ಜೋರು: ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭೂಮಿ ಹದಗೊಳಿಸಲು ತಡವಾದರೂ, ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಂಡಿರುವ ರೈತರು, ಬೇಗನೆ ನಾಲೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂಓದಿ:ಸವದತ್ತಿಯಲ್ಲಿ ಉತ್ತಮ ಮಳೆ.. ಬಿತ್ತನೆ ಕಾರ್ಯ ಚುರುಕು: ರೈತರಿಗೂ ಗ್ಯಾರಂಟಿ ಘೋಷಿಸಲು ಒತ್ತಾಯ