ತುಮಕೂರು: ಬಾಲಕಿಯ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
Published : Nov 11, 2023, 1:24 PM IST
ತುಮಕೂರು:ಇತ್ತೀಚೆಗೆ ಬಾಲಕಿಯ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತುಮಕೂರು ತಾಲೂಕಿನ ಚಿಕ್ಕಬೆಳ್ಳಾವಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಾಲಕಿಯ ಮೇಲೆ ದಾಳಿ ನಡೆಸಿ ಚಿರತೆ, ಸ್ಥಳದಿಂದ ಪರಾರಿಯಾಗಿತ್ತು. ಈ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯ ಮಾಡಿದ್ದರು.
ಜನರ ಒತ್ತಾಯದ ಮೇರೆಗೆ ಗ್ರಾಮದ ಹೊರವಲಯದ ಕೋಳಿ ಫಾರ್ಮ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇರಿಸಿದ್ದರು. ಇಂದು ಬೆಳಗ್ಗೆ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಬೆಳ್ಳಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಬಾರಿ ಚಿರತೆ ದಾಳಿ ನಡೆದಿದೆ. ಆರ್ಎಫ್ಒ ಪವಿತ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಗ್ರಾಮಸ್ಥರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೋಳಿ ಶೆಡ್ ಮೇಲೆ ದಾಳಿ ಮಾಡಿದ್ದ ಚಿರತೆ:ಬೆಂಗಳೂರಿನ ನೆಲಮಂಗಲ ತಾಲೂಕಿನ ಬಾಪೂಜಿ ನಗರದ ರಾಜೇಶ್ ಎಂಬುವರ ತೋಟದಲ್ಲಿನ ಕೋಳಿ ಶೆಡ್ ಮೇಲೆ ಇತ್ತೀಚೆಗೆ ಚಿರತೆ ದಾಳಿ ನಡೆಸಿತ್ತು. ಚಿರತೆ ದಾಳಿಯಿಂದ ಶೆಡ್ನಲ್ಲಿದ್ದ ನೂರಕ್ಕೂ ಹೆಚ್ಚು ನಾಟಿ ಕೋಳಿಗಳು ಮೃತಪಟ್ಟಿದ್ದವು.
ಇದನ್ನೂ ಓದಿ:ಬೆಂಗಳೂರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ: ಬಲೆಗೆ ಕೆಡವಲು ಮುಂದುವರಿದ ಕಾರ್ಯಾಚರಣೆ