ಪ್ರಮಾಣವಚನ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್: ಪರದಾಡಿದ ಜನ - ಸಚಿವರ ಪ್ರಮಾಣ ವಚನ ಸ್ವೀಕಾರ
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ಸಾರ್ವಜನಿಕರು ಸುಮಾರು ಹೊತ್ತು ಕಿರಿಕಿರಿ ಅನುಭವಿಸುವಂತಾಗಿತ್ತು. ಕಂಠೀರವ ಕ್ರೀಡಾಂಗಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಾದ ವಿಠ್ಠಲ ಮಲ್ಯ ರಸ್ತೆ, ಕೆಜಿ ರಸ್ತೆ, ಶೇಷಾದ್ರಿ ರಸ್ತೆ, ಎನ್ ಆರ್ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಪೂರ್ಣ ಸಂಚಾರ ದಟ್ಟಣೆ ನಿರ್ಮಾಣವಾಗಿತ್ತು.
ಈ ರಸ್ತೆಗಳಲ್ಲಿ ಒಂದು ಕಿಲೋಮೀಟರ್ ಕ್ರಮಿಸಲು ವಾಹನ ಸವಾರರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಯ ತೆಗೆದುಕೊಳ್ಳುವಂತಾಗಿತ್ತು. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆ ಕೇವಲ ವಿವಿಐಪಿ ವಾಹನಗಳಿಗೆ ಮಾತ್ರ ಎಂಬಂತಿತ್ತು. ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆಗಮನದ ಸಂದರ್ಭದಲ್ಲಿ ಸುಮಾರು 20 ನಿಮಿಷ ಎಲ್ಲಾ ವಾಹನಗಳನ್ನು ತಡೆ ಹಿಡಿಯಲಾಗಿತ್ತು. ಇದರಿಂದಾಗಿ ಸಾರ್ವಜನಿಕಕರು ಸಂಚಾರಿ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು.
ಇದನ್ನೂ ನೋಡಿ:ನೂತನ ಸಿಎಂ ಸಿದ್ದರಾಮಯ್ಯ ಪದಗ್ರಹಣ: ಹುಬ್ಬಳ್ಳಿಯಲ್ಲಿ ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ