ತುಮಕೂರು: ಖೋಟಾ ನೋಟು ಚಲಾವಣೆ ಯತ್ನ, ವಿಚಾರಿಸುತ್ತಿದ್ದಂತೆ ಯುವಕರು ಪರಾರಿ
Published : Dec 20, 2023, 4:28 PM IST
|Updated : Dec 20, 2023, 4:54 PM IST
ತುಮಕೂರು:ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಮೂವರು ಯುವಕರನ್ನು ಅಂಗಡಿಯವರು ವಿಚಾರಿಸಲು ಮುಂದಾದ ಸಂದರ್ಭದಲ್ಲಿ ಅವರು ಸ್ಥಳದಿಂದ ಪರಾರಿಯಾಗಿರುವ ಘಟನೆ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ವಿ.ಆರ್.ಎಸ್.ಟಿ ಮೊಬೈಲ್ ಅಂಗಡಿಯಲ್ಲಿ ಘಟನೆ ವರದಿಯಾಗಿದೆ. ₹10,500 ಬೆಲೆಯ ಮೊಬೈಲ್ ಖರೀದಿಸಲು ಬಂದಿದ್ದ ಯುವಕರು, 500 ರೂಪಾಯಿ ಮುಖಬೆಲೆಯ 21 ನೋಟುಗಳನ್ನು ನೀಡಿದ್ದರು. ಅಂಗಡಿಯವರು ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಸ್ಥಳದಿಂದ ಪರಾರಿಯಾಗಿದ್ದಾರೆ. ಅಂಗಡಿ ಮಾಲೀಕ ನವೀನ್ ಖೋಟಾ ನೋಟುಗಳನ್ನು ಪೊಲೀಸರಿಗೊಪ್ಪಿಸಿ, ದೂರು ನೀಡಿದ್ದಾರೆ. ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಂಗಡಿಯ ಸ್ಯಾಮ್ಸಂಗ್ ಪ್ರೊಮೋಟರ್ ರೇಖಾ ಪ್ರತಿಕ್ರಿಯಿಸಿ, "ಸಂಜೆ 6.30ರ ಹೊತ್ತಿಗೆ ಮೂವರು ಯುವಕರು ಬಂದು ಕಡಿಮೆ ಬೆಲೆಯ 5ಜಿ ಮೊಬೈಲ್ ಕೇಳಿದರು. ನಾನು ಕಡಿಮೆ ಬೆಲೆಯ ಎಲ್ಲಾ ಮೊಬೈಲ್ ಫೋನ್ಗಳನ್ನು ತೋರಿಸಿದೆ. ಅದರಲ್ಲಿ 10,500 ರೂಪಾಯಿಯ ಒಂದು ಮೊಬೈಲ್ ಆಯ್ಕೆ ಮಾಡ್ಕೊಂಡ್ರು. ನಂತರ ತಮ್ಮ ಬಳಿ ₹10,000 ಮಾತ್ರ ಇದೆ. 500 ರೂಪಾಯಿ ಎಟಿಎಂನಲ್ಲಿ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಹೋದರು. 5 ನಿಮಿಷದ ಬಳಿಕ ಸರಿಯಾಗಿ 10,500 ರೂಪಾಯಿ ತೆಗೆದುಕೊಂಡು ಬಂದು, ಅವರಲ್ಲೇ ಎಣಿಸಲು ಚರ್ಚೆಯಾಗುತ್ತಿತ್ತು. ಆಗ ನಾನೇ, ಎಣಿಸುವುದಾಗಿ ನೋಟುಗಳನ್ನು ತೆಗೆದುಕೊಂಡೆ. ಇವುಗಳನ್ನು ಮುಟ್ಟಿದಾಗಲೇ ಎಲ್ಲವೂ ನಕಲಿ ನೋಟುಗಳೆನ್ನುವುದು ಗೊತ್ತಾಯ್ತು. ತಕ್ಷಣ ಅಂಗಡಿ ಮಾಲೀಕರಿಗೆ ಕರೆ ಮಾಡಿ ಹೇಳಿದೆ. ಬಂದವರೂ ನಕಲಿ ನೋಟುಗಳೆನ್ನುವುದನ್ನು ಖಚಿತಪಡಿಸಿಕೊಂಡು, ಯುವಕರನ್ನು ವಿಚಾರಿಸಿದರು. ಆಗ ಸ್ವಲ್ಪ ಗಲಿಬಿಲಿಗೊಂಡ ಯುವಕರು ಓಡಿಹೋದರು" ಎಂದರು.
ಇದನ್ನೂ ಓದಿ:ನಕಲಿ ನೋಟು ಜಾಲದ ವಿರುದ್ಧ ಎನ್ಐಎ ಕಾರ್ಯಾಚರಣೆ: ಕರ್ನಾಟಕ, ಮಹಾರಾಷ್ಟ್ರ, ಯುಪಿ ಸೇರಿ ಹಲವೆಡೆ ಶೋಧ