ರಸ್ತೆಯಲ್ಲಿ ಅಮ್ಮ ಮಕ್ಕಳ ಸವಾರಿ: ಕೆ.ಗುಡಿಯಲ್ಲಿ ಹುಲಿಗಳ ದರ್ಬಾರ್ ನೋಡಿ - ಒಟ್ಟಿಗೆ 3 ಹುಲಿಗಳು ಪ್ರವಾಸಿಗರ ಕಣ್ಣಿಗೆ
ಚಾಮರಾಜನಗರ: ಕರ್ನಾಟಕದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಚಾಮರಾಜನಗರ ತಾಲೂಕಿನ ಕ್ಯಾತದೇವರ ಗುಡಿಯಲ್ಲಿ (ಕೆ.ಗುಡಿ) ಒಂದಲ್ಲ ಎರಡಲ್ಲ ಮೂರು ಹುಲಿಗಳು ಒಟ್ಟೊಟ್ಟಿಗೆ ದರ್ಶನ ನೀಡಿವೆ. ಸೋಮವಾರ ಬೆಳಗ್ಗೆ ಸಫಾರಿಗೆ ತೆರಳಿದ್ದವರು ಈ ದೃಶ್ಯ ಕಂಡು ಪುಳಕಗೊಂಡರು. ಸಫಾರಿಗೆ ತೆರಳಿದವರು ಆನೆ, ಕಾಡೆಮ್ಮೆ ಹಾಗೂ ಪಕ್ಷಿಗಳನ್ನು ನೋಡುತ್ತಿರುತ್ತಾರೆ. ಆದರೆ, ಹುಲಿಗಳನ್ನು ಕಾಣಲು ಹಾತೊರೆಯುತ್ತಾರೆ. ಅಂತಹದರಲ್ಲಿ ಒಂದಲ್ಲ 3 ಹುಲಿಗಳು ಪ್ರವಾಸಿಗರ ಕಣ್ಣಿಗೆ ಬಿದ್ದಿವೆ.
ಕೆ.ಗುಡಿ ಸಮೃದ್ಧ ವನ್ಯಸಂಪತ್ತು ಹೊಂದಿದ್ದು, ಪಕ್ಷಿ ವೀಕ್ಷಣೆ ಮತ್ತು ಪ್ರಕೃತಿ ಸವಿಯಲು ಹೇಳಿ ಮಾಡಿಸಿದ ತಾಣವಾಗಿದೆ. ಹುಲಿಗಳ ದರ್ಶನ ಇಲ್ಲಿ ತೀರಾ ಅಪರೂಪ. ತಾಯಿ ಹುಲಿ ಹಾಗೂ ಎರಡು ಮರಿ ಸೇರಿ 3 ಹುಲಿಗಳನ್ನು ಕಂಡ ಸಫಾರಿಗರು ಸಂತಸಗೊಂಡಿದ್ದಾರೆ.
ಇದನ್ನೂ ಓದಿ:ಕೆ ಗುಡಿಯಲ್ಲಿ ಹುಲಿ ದರ್ಶನ: ಪ್ರವಾಸಿಗರ ಮುಂದೆ ಟೆರಿಟರಿ ಗುರುತಿಸಿದ ವ್ಯಾಘ್ರ
ಇತ್ತೀಚೆಗೆ ಕೆ.ಗುಡಿಯಲ್ಲಿ ಪ್ರವಾಸಿಗರು ಸಫಾರಿ ಮಾಡುತ್ತಿದ್ದಾಗ ಹುಲಿರಾಯ ಕಾಣಿಸಿಕೊಂಡಿದ್ದ. ಹುಲಿ ಮರವೊಂದರ ಬಳಿ ತನ್ನ ಸರಹದ್ದನ್ನು ಗುರುತಿಸುವ ಕೆಲಸ ಮಾಡುತ್ತಿತ್ತು. ಉಗುರಿನಿಂದ ಮರ ಗೀರುವುದು, ಮೂತ್ರ ವಿಸರ್ಜನೆ ಮಾಡುವ ಮೂಲಕ ಅವುಗಳು ತಮ್ಮ ಸರಹದ್ದು ಗುರುತಿಸಿಕೊಳ್ಳುತ್ತವಂತೆ.