ಶಿವಗಂಗಾಗಿರಿಯಲ್ಲಿ ಕಾಣಿಸಿಕೊಂಡ ಮೂರು ಚಿರತೆಗಳು: ವಿಡಿಯೋ - ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ
Published : Sep 4, 2023, 8:06 PM IST
ಚಿಕ್ಕಮಗಳೂರು :ಕಡೂರು ತಾಲೂಕಿನ ಪ್ರಸಿದ್ಧ ಶಿವಗಂಗಾಗಿರಿಯಲ್ಲಿ ಮೂರು ಚಿರತೆಗಳು ಪತ್ತೆಯಾಗಿವೆ. ಗಿರಿ ಮೇಲಿನ ಕಲ್ಲಿನ ಬಂಡೆ ಮೇಲೆ ಮೂರು ಚಿರತೆಗಳು ಆಟವಾಡಿಕೊಂಡಿದ್ದು, ಈ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಿವಗಂಗಾಗಿರಿಯ ಕೆಳಗಿರುವ ದೇವಾಲಯಲ್ಲಿನ ಮದುವೆ ಕಾರ್ಯಕ್ರಮ ಸಂದರ್ಭ ಡ್ರೋನ್ ಕ್ಯಾಮರಾದಲ್ಲಿ ಗಿರಿಯ ವಿಡಿಯೋ ಮಾಡುವಾಗ ಚಿರತೆಗಳು ಗೋಚರಿಸಿವೆ. ಗಿರಿಯ ತುದಿಯಲ್ಲಿ ಚಿರತೆ ಇರುವುದನ್ನು ಕಂಡು ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಇದರಿಂದಾಗಿ ಕಡೂರು ತಾಲೂಕಿನ ಯಗಟಿ ಸಮೀಪದ ಶಿವ ಗಂಗಾಗಿರಿ ಬೆಟ್ಟದ ಸುತ್ತಮುತ್ತಲ ಹೊಲಗಳಿಗೆ ಕೆಲಸಕ್ಕೆ ತೆರಳಲು ಸ್ಥಳೀಯರು ಹೆದರುವಂತಾಗಿದೆ.
ಚಿರತೆಗಳನ್ನು ಹಿಡಿದು ಸಾಗಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಈ ಭಾಗದಲ್ಲಿ ಚಿರತೆಗಳು ಸಂಚಾರ ಮಾಡುವುದು ಸಾಮಾನ್ಯವಾಗಿತ್ತು. ಯಾವುದೋ ಒಂದು ಚಿರತೆ ಇರಬಹುದು ಎಂಬ ಯೋಚನೆಯಲ್ಲಿ ಗ್ರಾಮಸ್ಥರು ಇದ್ದರು. ಆದರೆ ಬೆಟ್ಟದ ಮೇಲೆ ಒಂದೇ ಜಾಗದಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿವೆ. ಹೀಗಾಗಿ ಈ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಕೂಡಲೇ ಈ ಬೆಟ್ಟದಲ್ಲಿ ಬೋನ್ ಇಟ್ಟು ಚಿರತೆಗಳನ್ನು ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡಲೇಬೇಕು ಎಂದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇಲ್ಲದಿದ್ದರೆ ನಿತ್ಯ ನಾವು ತೋಟ, ಗದ್ದೆ, ಹೊಲಗಳಿಗೆ ಕೆಲಸಕ್ಕೆ ಹೋಗಲು ಕಷ್ಟಕರವಾಗುತ್ತದೆ ಎಂದು ಮನವಿಯನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:ಆಳಂದ ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷ: ಒಬ್ಬೊಬ್ಬರೇ ಓಡಾಡಲು ಹಿಂದೇಟು ಹಾಕುತ್ತಿರುವ ಗ್ರಾಮಸ್ಥರು