ಕಬಡ್ಡಿ ಆಡಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಭಾಪತಿ ಹೊರಟ್ಟಿ- ವಿಡಿಯೋ - ETV Bharat Kannada News
ಧಾರವಾಡ :ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ಹೆಬ್ಬಳ್ಳಿ ಗ್ರಾಮದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ 3 ದಿನಗಳ ಹೊನಲು ಬೆಳಕಿನ ಕಬಡ್ಡಿ ಹಬ್ಬದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಬಡ್ಡಿ ಆಡಿ ಗಮನ ಸೆಳೆದರು. ಬಳಿಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಮೈದಾನ ಮುಟ್ಟಿ ನಮಸ್ಕರಿಸಿ ಆಟ ಆರಂಭಿಸಿದ ಅವರು, ಒಂದು ಸುತ್ತು ರೈಡ್ ಮಾಡಿ ಒಬ್ಬರನ್ನು ಔಟ್ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು.
ಇದಕ್ಕೂ ಮುನ್ನ ಪಂದ್ಯಾವಳಿಗೆ ಹೊರಟ್ಟಿ ಚಾಲನೆ ನೀಡಿದರು. ಹೆಬ್ಬಳ್ಳಿ ನೆಹರು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಕಬಡ್ಡಿ ಹಬ್ಬ ನಡೆಯುತ್ತಿದೆ. ರಾಜ್ಯದ ವಿವಿಧೆಡೆಗಳಿಂದ ಆಟಗಾರರು ಆಗಮಿಸಿದ್ದಾರೆ.
"ನಾನು ರಾಷ್ಟ್ರಮಟ್ಟದಲ್ಲಿ ಕಬಡ್ಡಿ ಆಡಿದ್ದೇನೆ. 2 ಬಾರಿ ಯೂನಿವರ್ಸಿಟಿ ತಂಡ ಪ್ರತಿನಿಧಿಸಿದ್ದೆ. ಇವತ್ತು ಸುಮಾರು 25 ವರ್ಷದ ನಂತರ ಆಡಿದ್ದೇನೆ. ಹಿಂದೆಲ್ಲಾ ಶಾಸಕರ ದಿನಾಚರಣೆಯಲ್ಲಿ ಅಡುತ್ತಿದ್ದೆವು. ಈಗ ಬಂದ್ ಆಗಿದೆ. ಇವತ್ತು ಬಹಳ ಖುಷಿಯಾಯಿತು" ಎಂದು ಹೊರಟ್ಟಿ ಹೇಳಿದರು.
"ದೇಶಿ ಕ್ರೀಡೆ ಕಬಡ್ಡಿಯಿಂದ ದೇಹಕ್ಕೆ ಸಂಪೂರ್ಣ ವ್ಯಾಯಾಮ ಸಿಗುತ್ತದೆ. ನಾವೆಲ್ಲ ಮೈದಾನ ಇಲ್ಲದೇ ಪರದಾಡಿದ್ದೆವು. ಜೈಪುರಕ್ಕೆ ಹೋಗಿ ಕಬಡ್ಡಿಯಲ್ಲಿ ನಾನು ಕೈ ಮುರಿದುಕೊಂಡು ಬಂದಿದ್ದೆ. ಆಗೆಲ್ಲ ಮಣ್ಣಲ್ಲೇ ಅಡುತ್ತಿದ್ದೆವು. ಈಗ ಸುಧಾರಣೆ ಆಗಿದೆ. ಶಾಸಕರ ದಿನಾಚರಣೆ ಮಾಡುವಾಗ ಹೆಗಡೆ ಹಾಗೂ ಜೆ.ಹೆಚ್.ಪಟೇಲ್ ಅವರಿದ್ದಾಗ ಕ್ರೀಡಾಕೂಟ ನಡೆಯುತ್ತಿತ್ತು. ಆಗ ಸಿಎಂ ಟೀಮ್ ಹಾಗೂ ಎದುರಾಳಿ ಪ್ರತಿಪಕ್ಷದ ಟೀಮ್‌ಗಳ ನಡುವೆ ಪಂದ್ಯ ನಡೆಯುತ್ತಿತ್ತು. ರನ್ನಿಂಗ್ ರೇಸ್ ಕೂಡಾ ಇತ್ತು. ಆದರೆ ಈಗ ರಾಜಕೀಯ ಹೊಲಸಾಗಿದೆ. ಎಲ್ಲವೂ ನಿಂತಿದೆ." ಎಂದರು.
ಇದನ್ನೂ ಓದಿ:ಶಾಲೆಗೆ ಟೈಟ್ ಆಗಿ ಬಂದ ದೈಹಿಕ ಶಿಕ್ಷಕ.. ಗ್ರಾಮಸ್ಥರ ಆಕ್ರೋಶ