ಭೀಮನ ಅಮಾವಾಸ್ಯೆ: ಮಾದಪ್ಪನ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ - ವಿಡಿಯೋ - etv bharat kannda
ಚಾಮರಾಜನಗರ: ಭೀಮನ ಅಮಾವಾಸ್ಯೆ ಹಿನ್ನೆಲೆ ಕರ್ನಾಟಕದ ಪ್ರಮುಖ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಸಾಗಾರವೇ ಹರಿದು ಬಂದಿದೆ. ಅಮಾವಾಸ್ಯೆ ಹಿಂದಿನ ದಿನವೇ 80 ಸಾವಿರದಷ್ಟು ಮಂದಿ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಮಾದಪ್ಪನ ಬೆಟ್ಟದಲ್ಲಿ ಎತ್ತ ನೋಡಿದರತ್ತ ಭಕ್ತ ಸಮೂಹವೇ ಕಾಣುತ್ತಿದ್ದು, ಸಾರಿಗೆ ಸಂಸ್ಥೆಯು ಹೆಚ್ಚುವರಿಯಾಗಿ 300 ಬಸ್ಗಳನ್ನು ನಿಯೋಜನೆ ಮಾಡಿದೆ. ದೇಗುಲದ ಪ್ರಾಂಗಣಕ್ಕೆ ವಿವಿಧ ಹಣ್ಣು-ತರಕಾರಿ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ.
ಭೀಮನ ಅಮಾವಾಸ್ಯೆ ವಿಶೇಷತೆ: ಪುರಾಣಗಳ ಪ್ರಕಾರ, ಶಿವನು ಭೀಮನ ಅಮಾವಾಸ್ಯೆಯಂದೇ ಪಾರ್ವತಿ ದೇವಿಯನ್ನು ವಿವಾಹವಾಗುತ್ತಾನೆ. ಆದ್ದರಿಂದ ಈ ದಿನವನ್ನು ಭೀಮನ ಅಮಾವಾಸ್ಯೆಯೆಂದು ಆಚರಿಸಲಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು, ವಿವಾಹಿತ ಹೆಣ್ಣುಮಕ್ಕಳು ಈ ವ್ರತವನ್ನು ಕೈಗೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಶಿವ-ಪಾರ್ವತಿಯರು ಸಂತಾನ, ಆಯಸ್ಸು, ಯಶಸ್ಸು, ಸಂತೋಷ, ಐಶ್ವರ್ಯ ಸೇರಿದಂತೆ ಎಲ್ಲವನ್ನು ಕರುಣಿಸುತ್ತಾರೆಂಬ ನಂಬಿಕೆಯಿದೆ. ಜೊತೆಗೆ ಆಷಾಢ ಮಾಸದಲ್ಲಿ ತವರಿಗೆ ಹೋಗಿದ್ದ ಮಹಿಳೆಯರು ಭೀಮನ ಅಮಾವಾಸ್ಯೆ ದಿನದಂದು ಮತ್ತೆ ಪತಿ ಮನೆಗೆ ಆಗಮಿಸಿ, ಗಂಡನ ಪಾದ ತೊಳೆದು, ಪೂಜಿಸುತ್ತಾರೆ.
ಇದನ್ನೂ ಓದಿ:ಮಣ್ಣೆತ್ತಿನ ಅಮಾವಾಸ್ಯೆ-ಚಾಮುಂಡಿ ಬೆಟ್ಟದಲ್ಲಿ ಸ್ತ್ರೀ ಸಾಗರ: ವಿಡಿಯೋ