ಧಾರವಾಡ: ಜಮೀನಿನಲ್ಲಿದ್ದ ಹತ್ತಿ ಕಳ್ಳತನ, ರೈತ ಕಂಗಾಲು
Published : Dec 27, 2023, 10:46 PM IST
ಧಾರವಾಡ:ರೈತರ ಜಮೀನಿನಲ್ಲಿರುವ ಬೋರ್‌ವೆಲ್ ಪಂಪ್‌ಸೆಟ್ ಹಾಗೂ ವಿವಿಧ ಸಾಮಗ್ರಿ ಕಳ್ಳತನ ಮಾಡುತ್ತಿದ್ದ ಖದೀಮರ ಕಣ್ಣು ಇದೀಗ ಬೆಳೆಗಳ ಮೇಲೂ ಬಿದ್ದಿದೆ. ಹತ್ತಿ ಫಸಲು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ನಡೆದಿದೆ.
ಮೈಲಾರಪ್ಪ ಕುರಗುಂದ ಎಂಬವರ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬಿಡಿಸಿಕೊಂಡು ರಾತ್ರಿ ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಹತ್ತಿ ಬಿಡಿಸುವ ಯೋಚನೆ ಮಾಡಿಕೊಂಡು ಜಮೀನಿಗೆ ಬಂದ ರೈತ ಹೊಲದಲ್ಲಿದ್ದ ಹತ್ತಿ ಮಾಯವಾಗಿದ್ದನ್ನು ನೋಡಿ ಕಣ್ಣೀರು ಹಾಕಿದರು.
ಒಂದು ಬಾರಿ ಹತ್ತಿ ಬಿಡಿಸಿ ಮಾರಾಟ ಮಾಡಿದ್ದು, ಎರಡನೇ ಬಾರಿ ಬಿಡಿಸಬೇಕಾಗಿತ್ತು. ಮನೆಯಲ್ಲಿದ್ದ ಇತರೆ ಕೆಲಸಗಳು ಹಾಗೂ ಕೆಲಸಗಾರರ ಸಮಸ್ಯೆಯಿಂದ ಹಾಗೇ ಬಿಟ್ಟಿದ್ದರು. ಇದೀಗ ಬೆಳೆ ಕಳ್ಳರ ಪಾಲಾಗಿದೆ.
ಬ್ಯಾಲ್ಯಾಳ ಗ್ರಾಮದ ರೈತರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ಮೊದಲ ಬಾರಿಗೆ ನಮ್ಮ ಫಸಲು ಕಳ್ಳತನವಾಗಿದೆ. ಆಟೋ ತಂದು ಹತ್ತಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ. ಹೀಗಾದರೆ ನಾವು ಬೆಳೆ ಬೆಳೆಯುವುದಾರೂ ಹೇಗೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕಳ್ಳರನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂಓದಿ:ಕೊಪ್ಪಳ: ಜೋರಾಗಿ ಕಿರುಚಿ ಬ್ಯಾಂಕ್ ಕಳ್ಳತನ ತಪ್ಪಿಸಿದ ವ್ಯಕ್ತಿ