ಕರ್ನಾಟಕ

karnataka

ನಿಂತ ಕಾರಲ್ಲಿನ ಹಣ ಕಳವು

ETV Bharat / videos

ಕೋಟಿ ಬೆಲೆ ಬಾಳುವ BMW ಕಾರಿನ ಗಾಜು ಒಡೆದು ₹13.75 ಲಕ್ಷ ದೋಚಿದ ಖದೀಮರು: ಬೆಂಗಳೂರಿನಲ್ಲಿ ನಡೆದ ಘಟನೆಯ ವಿಡಿಯೋ

By ETV Bharat Karnataka Team

Published : Oct 23, 2023, 3:41 PM IST

Updated : Oct 24, 2023, 10:09 AM IST

ಬೆಂಗಳೂರು: ನಿಲ್ಲಿಸಿದ್ದ ಐಷಾರಾಮಿ ಬಿಎಂಡಬ್ಲ್ಯೂ ಕಾರಿನಿಂದ 13.75 ಲಕ್ಷ ರೂಪಾಯಿ ಇದ್ದ ಹಣದ ಬ್ಯಾಗ್ ಅನ್ನು ಖದೀಮರು ಕದ್ದೊಯ್ದ ಘಟನೆ ಅಕ್ಟೋಬರ್ 20 ರಂದು ಆನೇಕಲ್​ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಆನೇಕಲ್ ಪಕ್ಕದ ಹೊನ್ನಕಳಸಾಪುರದ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ಮೋಹನ್ ಬಾಬು ಎಂಬುವರೇ ಹಣ ಕಳೆದುಕೊಂಡವರು. ಮೋಹನ್ ಬಾಬು ನೀಡಿದ ದೂರಿನಂತೆ ಸರ್ಜಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ: ಬೈಕ್​ಗಳ ಮಧ್ಯೆ ಕಾರನ್ನು ನಿಲ್ಲಿಸಲಾಗಿದೆ. ಅದರ ಹಿಂದೆ ಮತ್ತೊಂದು ಬಿಳಿ ಬಣ್ಣದ ಕಾರು ಕೂಡ ಇದೆ. ಈ ವೇಳೆ ಅಲ್ಲಿಗೆ ಬರುವ ವ್ಯಕ್ತಿಯೊಬ್ಬ ಆಚೆ ಈಚೆ ನೋಡುತ್ತಾ ನಿಧಾನವಾಗಿ ಕಾರಿನ ಬಳಿ ಹೋಗುತ್ತಾನೆ. ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಕಾರಿನ ಬಳಿಗೆ ಬೈಕ್​ ಸಮೇತ ಬರುತ್ತಾನೆ. ಯಾರೂ ನೋಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಖದೀಮ ತನ್ನಲ್ಲಿದ್ದ ವಸ್ತುವಿನಿಂದ ಕಾರಿನ ಗಾಜನ್ನು ಒಡೆದು ಹಾಕುತ್ತಾನೆ. ಬಳಿಕ ಅದರೊಳಗೆ ನುಗ್ಗುವ ಆತ ಹಣದ 2 ಬ್ಯಾಗ್​ಗಳನ್ನು ತೆಗೆದುಕೊಂಡು, ಬೈಕ್​ನಲ್ಲಿ ಇಬ್ಬರೂ ಪರಾರಿಯಾಗುತ್ತಾರೆ. ಈ ಎಲ್ಲಾ ವಿದ್ಯಮಾನ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ದೂರುದಾರ ಮೋಹನ್​ ಬಾಬು ಅ.20ರ ಮಧ್ಯಾಹ್ನ ಜಮೀನೊಂದರ ರಿಜಿಸ್ಟರ್​ ಮಾಡಿಸಲು ಸರ್ಜಾಪುರದ ಸಬ್​ ರಿಜಿಸ್ಟರ್​​ ಕಚೇರಿಗೆ ತೆರಳಿದ್ದರು. ಈ ವೇಳೆ ರಿಜಿಸ್ಟ್ರೇಷನ್​ ಮಾಡಿಸಲು 13.75 ಲಕ್ಷ ರೂ.ಗಳನ್ನು ಬ್ಯಾಗ್​ನಲ್ಲಿ ಕೊಂಡೊಯ್ದಿದ್ದರು. ಬ್ಯಾಗ್​ಅನ್ನು ತಮ್ಮ ಐಷಾರಾಮಿ ಕಾರಿನಲ್ಲೇ ಬಿಟ್ಟು, ಲಾಕ್​ ಮಾಡಿಕೊಂಡು ಸಬ್​ ರಿಜಿಸ್ಟರ್ ಆಫೀಸ್​ಗೆ ತೆರಳಿದ್ದರು. ಈ ವೇಳೆ ಕಳ್ಳರು ಕೈಚಳಕ ಮೆರೆದಿದ್ದಾರೆ.  

ಮೋಹನ್​ ಬಾಬು ರಿಜಿಸ್ಟರ್​ ಕಚೇರಿಯಿಂದ ಹೊರಬಂದು ನೋಡಿದಾಗ ಹಣದ ಬ್ಯಾಗ್​ ಕಳ್ಳತನ ಆಗಿರುವುದು ಗೊತ್ತಾಗಿದೆ. ಕಾರಿನ ಬಲಭಾಗದ (ಮುಂಭಾಗ) ಕಿಟಕಿ ಗಾಜು ಒಡೆದು 13.75 ಲಕ್ಷ ರೂ.ಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳರನ್ನು ಪತ್ತೆ ಮಾಡಿ, ಹಣ ಕೊಡಿಸುವಂತೆ ಮೋಹನ್​ ಬಾಬು ಸರ್ಜಾಪುರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​ ಮನೆಯಿಂದಲೇ ವರ್ತೂರು​ ಸಂತೋಷ್​ ಅರೆಸ್ಟ್​​.. ಕಾರಣವೇನು?

Last Updated : Oct 24, 2023, 10:09 AM IST

ABOUT THE AUTHOR

...view details