ಅವರು ದಲಿತ ಸಿಎಂ ಆಗ್ತಾರೆ ಎನ್ನುವ ಆಶಾಭಾವನೆ ಇತ್ತು: ಧ್ರುವ ಒಡನಾಡಿಗಳ ಕಂಬನಿ - congress MLA dhruvanarayana
ಚಾಮರಾಜನಗರ:ರಾಜ್ಯದಲ್ಲಿ ಧ್ರುವನಾರಾಯಣ ಸಚಿವರಾಗುತ್ತಾರೆ, ದಲಿತ ಸಿಎಂ ಆಗುತ್ತಾರೆ ಎನ್ನುವ ಆಶಾಭಾವನೆ ಇಟ್ಟುಕೊಂಡಿದ್ದೆವು. ಯಾವ ಪಕ್ಷದ ಜನರೇ ಆಗಿರಲಿ ಎಲ್ಲರಿಗೂ ಕೆಲಸ ಮಾಡಿಕೊಡುತ್ತಿದ್ದರು, ಯಾವಾಗಲೂ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿದ್ದರು, ಅವರಲ್ಲಿ ಪಕ್ಷ, ಧರ್ಮ, ಜಾತಿ ಬೇಧ ಯಾವುದು ಇರಲಿಲ್ಲ ಎಂದು ಧ್ರುವನಾರಾಯಣ ಒಡನಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಬಸವರಾಜು ಕಂಬನಿ ಮಿಡಿದಿದ್ದಾರೆ.
ಧ್ರುವನಾರಾಯಣ ಹುಟ್ಟೂರು ಹೆಗ್ಗವಾಡಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಾಗಿ 24 ಗಂಟೆಯೂ ದುಡಿಯುತ್ತಿದ್ದ ಧ್ರುವನಾರಾಯಣ ರಾಜ್ಯದಲ್ಲಿ ಭರವಸೆ ನಾಯಕರಾಗಿದ್ದರು. ವಿಶ್ರಾಂತಿಯೇ ಇಲ್ಲದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಅವರ ಅಗಲಿಕೆ ಪಕ್ಷಕ್ಕೆ, ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಹಾಕಿದರು.
ಕ್ಯಾಪ್ಟನ್ಗಳಿಲ್ಲದ ಕಾಂಗ್ರೆಸ್: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ನ ಕ್ಯಾಪ್ಟನ್ಸ್ಗಳಾಗಿದ್ದ ಎಚ್.ಎಸ್.ಮಹಾದೇವಪ್ರಸಾದ್ ಹಾಗೂ ಧ್ರುವನಾರಾಯಣ ಅವರು ಅಭಿವೃದ್ಧಿಗೆ ಟೊಂಕ ಕಟ್ಟಿದ್ದವರು. ಎಚ್ಎಸ್ಎಂ ಹೋದ ಬಳಿಕ ಕಾಂಗ್ರೆಸ್ ಬಡವಾಯಿತು, ಈಗ ಧ್ರುವನಾರಾಯಣ ಹೋದ ಬಳಿಕ ಮತ್ತಷ್ಟು ಬಡವಾಗಿದೆ ಎಂದು ಧ್ರುವನಾರಾಯಣ ಅನುಯಾಯಿ, ಆತ್ಮೀಯ ಸದಾಶಿವಮೂರ್ತಿ ದುಃಖ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ಧ್ರುವನಾರಾಯಣ ತಂದರೇ ರಾಜ್ಯ ಸರ್ಕಾರದ ಯೋಜನೆಗಳನ್ನು ಎಚ್ಎಸ್ಎಂ ತರುತ್ತಿದ್ದರು. ಧ್ರುವನಾರಾಯಣ ಅವರ ಅಗಲಿಕೆ ಕಾಂಗ್ರೆಸ್ಗೆ ಮಾತ್ರವಲ್ಲ ಜಿಲ್ಲೆಗೆ, ಹಳೇ ಮೈಸೂರು ಭಾಗದ ಅಭಿವೃದ್ಧಿಗೆ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ:ಧ್ರುವನಾರಾಯಣ ಹುಟ್ಟೂರಲ್ಲಿ ನೀರವ ಮೌನ: ತಂದೆ - ತಾಯಿ ಸಮಾಧಿ ಬಳಿ ಅಂತ್ಯಕ್ರಿಯೆ, ಸಕಲ ಸಿದ್ಧತೆ