ಪಂಪ್ ಹೌಸ್ನಲ್ಲಿ ಅಡಗಿ ಕುಳಿತಿದ್ದ ಚಿರತೆ: ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ರೈತ ಬಚಾವ್ - etv bharat kannada
ತುಮಕೂರು:ಪಂಪ್ ಹೌಸ್ನಲ್ಲಿ ಅಡಗಿ ಕುಳಿತಿದ್ದ ಚಿರತೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ರೈತರೊಬ್ಬರು ಪಾರಾಗಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದಲ್ಲಿ ನಡೆದಿದೆ. ಜಯರಾಮ್ ಪ್ರಾಣಾಪಾದಿಂದ ಪಾರಾದ ರೈತರಾಗಿದ್ದಾರೆ. ಎಂದಿನಂತೆ ನಿನ್ನೆ ರಾತ್ರಿ ತಮ್ಮ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದಾರೆ. ಪಂಪ್ ಹೌಸ್ನಲ್ಲಿ ಅಡಗಿಕೊಂಡಿದ್ದ ಚಿರತೆ, ಜಯರಾಮ್ ಅವರಿಗೆ ಗೋಚರಿಸಿಲ್ಲ. ಕತ್ತಲೆಯಲ್ಲಿ ಚಿರತೆ ಕಾಲು ಮುಟ್ಟಿದ್ದಾರೆ, ನಂತರ ಚಿರತೆಯನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡ ಜಯರಾಮ್ ಅವರು ಕ್ಷಣಾರ್ಧದಲ್ಲಿ ಪಂಪ್ ಹೌಸ್ ನಿಂದ ಹೊರಗೆ ಓಡಿ ಬಂದಿದ್ದಾರೆ.
ಇದರಿಂದಾಗಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದಂತಾಗಿದೆ. ಸ್ವಲ್ಪ ಯಾಮಾರಿದ್ದರೂ ಚಿರತೆ ದಾಳಿಗೆ ಒಳಗಾಗುತ್ತಿದ್ದರು. ಅಲ್ಲದೇ ಚಿರತೆ ಎಂದು ಸ್ಪಷ್ಟವಾಗುತ್ತಿದ್ದಂತೆ ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಹಾಕಿ ಚಿರತೆ ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ. ಚಿರತೆ ಸೆರೆಸಿಕ್ಕ ಹಿನ್ನೆಲೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ಹದಿನೈದು ದಿನಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ - ವಿಡಿಯೋ
ಮತ್ತೊಂದೆಡೆ, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಗ್ರಾಮದಲ್ಲಿ ರಾತ್ರಿಯಾಗುತ್ತಿದ್ದಂತೆ ಕರಡಿಯೊಂದು ನಿತ್ಯ ಗ್ರಾಮದೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿರುವ ಘಟನೆ ನಡೆದಿದೆ. ಗ್ರಾಮಸ್ಥರು ಕೂಡಲೇ ಕರಡಿಯನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.