ತಮಿಳುನಾಡಿನಲ್ಲಿ ಪೊಂಗಲ್ ಸಡಗರ: ಪ್ರಸಿದ್ಧ ಜಲ್ಲಿಕಟ್ಟು ಸ್ಪರ್ಧೆ ಪ್ರಾರಂಭ- ವಿಡಿಯೋ - ತಮಿಳುನಾಡಿನ ಪ್ರಸಿದ್ಧ ಜಲ್ಲಿಕಟ್ಟು ಸ್ಪರ್ಧೆ
ಮಧುರೈ: ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಡಗರ ಜೋರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಪ್ರಸಿದ್ಧ ಜಲ್ಲಿಕಟ್ಟು ಸ್ಪರ್ಧೆ ಮಧುರೈನ ಅವನಿಯಪುರಂನಲ್ಲಿ ಇಂದಿನಿಂದ ಆರಂಭವಾಗಿದೆ. ಹೈಕೋರ್ಟ್ ನಿರ್ದೇಶನದಂತೆ ಕೇವಲ 25 ಆಟಗಾರರು ಮಾತ್ರ (ಒಂದು ಬಾರಿ) ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶವಿದೆ. 'ಸುಮಾರು 300 ರಿಂದ 800ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆಯಿದೆ. ಜಲ್ಲಿಕಟ್ಟು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪೊಲೀಸ್ ಕಮಿಷನರ್ ನರೇಂದ್ರ ನಾಯರ್ ನೇತೃತ್ವದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ತುರ್ತು ವೈದ್ಯಕೀಯ ಅಗತ್ಯಗಳಿಗಾಗಿ 10 ವೈದ್ಯಕೀಯ ತಂಡಗಳು, ಆಂಬ್ಯುಲೆನ್ಸ್‌ಗಳು, ಗೂಳಿಗಳಿಗೆ ಪ್ರತ್ಯೇಕ ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ಇಲಾಖೆಯ ವಾಹನಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ' ಎಂದು ಮಧುರೈ ಜಿಲ್ಲಾಧಿಕಾರಿ ಅನೀಶ್ ಶೇಖರ್ ತಿಳಿಸಿದರು. ಸುಪ್ರೀಂ ಕೋರ್ಟ್ ಈ ಮೊದಲು ಜಲ್ಲಿಕಟ್ಟು ಆಚರಣೆಗೆ ತಡೆಯೊಡ್ಡಿತ್ತು. ಬಳಿಕ ಇಡೀ ರಾಜ್ಯವೇ ಒಗ್ಗೂಡಿ ಕೋರ್ಟ್ ಮೊರೆ ಹೋಗಿ ಹಬ್ಬದ ಆಚರಣೆಗೆ ಅನುಮತಿ ಪಡೆದಿದ್ದು, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.