'ಪಶ್ಚಿಮ ಬಂಗಾಳದ ಸ್ಥಿತಿ ಉಕ್ರೇನ್‌ಗಿಂತ ಕೆಟ್ಟದಾಗಿದೆ': ಸುವೇಂದು ಅಧಿಕಾರಿ - West Bengal BJP leader Suvendu Adhikari
ಹೂಗ್ಲಿ (ಪಶ್ಚಿಮ ಬಂಗಾಳ):ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕ ಸುವೇಂದು ಅಧಿಕಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪಶ್ಚಿಮ ಬಂಗಾಳದ ಪರಿಸ್ಥಿತಿ ಉಕ್ರೇನ್‌ಗಿಂತ ತುಂಬಾ ಕೆಟ್ಟದಾಗಿದೆ. ಬಂಗಾಳದಲ್ಲಿ ಸಂಭವಿಸುವಷ್ಟು ಸ್ಫೋಟಗಳು ಉಕ್ರೇನ್‌ನಲ್ಲಿ ನಡೆಯುತ್ತಿಲ್ಲ. ಅಲ್ಲಿ ಪರಿಸ್ಥಿತಿ ಸ್ವಲ್ಪ ಶಾಂತಿಯುತವಾಗಿದ್ದರೂ ಇತ್ತೀಚೆಗೆ ಬಂಗಾಳದಲ್ಲಿ ಸ್ಫೋಟಗಳು ನಡೆಯುತ್ತಿವೆ" ಎಂದಿದ್ಧಾರೆ.
ನಿನ್ನೆ (ಸೋಮವಾರ) ರಾಜ್ಯದಲ್ಲಿ ಅಕ್ರಮ ಪಟಾಕಿಗಳಿಗೆ ಸಂಬಂಧಿಸಿದ ಮತ್ತೊಂದು ಸ್ಫೋಟ ವರದಿಯಾದ ನಂತರ ಸುವೇಂದು ಈ ಹೇಳಿಕೆ ನೀಡಿದ್ದಾರೆ. ಕೇವಲ 7 ದಿನಗಳ ಅವಧಿಯಲ್ಲಿ ಪ.ಬಂಗಾಳದಲ್ಲಿ 3 ಸ್ಫೋಟಗಳು ಸಂಭವಿಸಿವೆ. ಬಿರ್ಭೂಮ್ ಜಿಲ್ಲೆಯ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ಸಂಭವಿಸಿದ ಇತ್ತೀಚಿನ ಸ್ಫೋಟದಿಂದ ಯಾವುದೇ ಸಾವು ನೋವು ವರದಿಯಾಗಿಲ್ಲ. ದಕ್ಷಿಣ 24 ಪರಗಣಸ್ ಜಿಲ್ಲೆಯ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೇ 16 ರಂದು ಪುರ್ಬಾ ಮೇದಿನಿಪುರ ಜಿಲ್ಲೆಯ ಮತ್ತೊಂದು ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ನಡೆದ ಮೊದಲ ಸ್ಫೋಟದಲ್ಲಿ 12 ಜನರು ಸಾವನ್ನಪ್ಪಿದ್ದರು.
ಅಭಿಷೇಕ್ ಬ್ಯಾನರ್ಜಿ ವಿರುದ್ಧದ ಸುಪ್ರೀಂ ಕೋರ್ಟ್ ತನಿಖೆಯ ಬಗ್ಗೆ ಮಾತನಾಡಿದ ಅವರು, "ಕಾನೂನು ಎಲ್ಲರಿಗೂ ಒಂದೇ. ಹಾಗಾದರೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮಮತಾ ಬ್ಯಾನರ್ಜಿ ಅವರನ್ನು ಶಾರದಾ ಚಿಟ್ ಫಂಡ್ ಹಗರಣದಲ್ಲಿ ಮತ್ತು ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯನ್ನು ಕಲ್ಲಿದ್ದಲು ಮತ್ತು ಹಸು ಕಳ್ಳಸಾಗಣೆ ಪ್ರಕರಣದಲ್ಲಿ ಏಕೆ ಬಿಟ್ಟಿವೆ" ಎಂದು ಪ್ರಶ್ನಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸುವೇಂದು ಅಧಿಕಾರಿ, "ಪ್ರಧಾನಿ ನರೇಂದ್ರ ಮೋದಿ ಅವರು 400 ಸ್ಥಾನಗಳನ್ನು ಗೆಲ್ಲುತ್ತಾರೆ" ಎಂದರು.
ಇದನ್ನೂ ಓದಿ:ಶಾರದಾ ಚಿಟ್ ಫಂಡ್ ಹಗರಣ: ಮಮತಾ ಬ್ಯಾನರ್ಜಿ ಬಂಧನಕ್ಕೆ ಸಿಬಿಐ ಹಿಂದೇಟು: ಮೋದಿಗೆ ಪತ್ರ ಬರೆದ ಸುವೇಂದು ಅಧಿಕಾರಿ