ಸುಳ್ಯ: ನಗರ ಪಂಚಾಯತ್ ಮುಂದೆ ನಿಧಿ ಸಂಗ್ರಹಿಸಿ ರಸ್ತೆ ದುರಸ್ತಿಗೆ ಪ್ರತಿಭಟನೆ
ಸುಳ್ಯ (ದಕ್ಷಿಣ ಕನ್ನಡ): ಸುಳ್ಯ-ಜಟ್ಟಿಪಳ್ಳ-ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ದುರಸ್ತಿ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಜನರು ತಾವೇ ನಿಧಿ ಸಂಗ್ರಹಣಾ ಅಣಕು ಅಭಿಯಾನದ ಮೂಲಕ ಸುಳ್ಯ ನಗರ ಪಂಚಾಯತ್ ಮುಂದೆ ಮಂಗಳವಾರ ಪ್ರತಿಭಟನೆ ಸಭೆ ನಡೆಸಿದರು. ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಕೇಸರಿ ಶಾಲುಗಳನ್ನು ಧರಿಸಿದ್ದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಗಣೇಶ್ ಭಟ್, ಸುಳ್ಯ – ಕೊಡಿಯಾಲಬೈಲು–ದುಗಲಡ್ಕ ರಸ್ತೆ ಅಭಿವೃದ್ಧಿಗೆ ಕಳೆದ ಅನೇಕ ಸಮಯಗಳಿಂದ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಕೂಡಾ ಈತನಕ ಸಂಪೂರ್ಣ ದುರಸ್ತಿ ಕಾರ್ಯ ನಡೆದಿಲ್ಲ. ಹಲವು ಭರವಸೆಗಳು ಸಿಕ್ಕಿದರೂ ಇದುವರೆಗೂ ಆಗಿಲ್ಲ. ಸುಳ್ಯ ಶಾಸಕರು ರಸ್ತೆಯ ಅಭಿವೃದ್ಧಿ ಮಾಡಬಹುದೆಂದು ನಿರೀಕ್ಷಿಸಿದ್ದೆವು, ಇದೀಗ ಅವರು ಮಂತ್ರಿಯಾದರೂ ಈ ಭಾಗದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ ಎಂದು ದೂರಿದರು. ಸಭೆಯ ಬಳಿಕ ನಗರ ಪಂಚಾಯತ್ ಎದುರು ಇಡಲಾಗಿದ್ದ ನಿಧಿ ಸಂಗ್ರಹಣಾ ಡಬ್ಬಿಗೆ ನೆರೆದಿದ್ದ ಜನರು ಹಣ ಹಾಕಿದರು.
ಇದನ್ನೂ ಓದಿ:ದೇವನಹಳ್ಳಿ: ಗ್ರಾಮ ಪಂಚಾಯಿತಿ ಅಕ್ರಮ ಆರೋಪ, ಸದಸ್ಯನಿಂದ ಅಂಬೇಡ್ಕರ್ ಭಾವಚಿತ್ರ ಹಿಡಿದು ಮೌನ ಪ್ರತಿಭಟನೆ