ಬೀದರ್... ಶಿಕ್ಷಕ ವರ್ಗಾವಣೆ: ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು! - ಬಾಗಲಕೋಟೆ
Published : Dec 8, 2023, 8:59 AM IST
ಬೀದರ್ : ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ವರ್ಗಾವಣೆಯಾದ ಕಾರಣ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಚಿಟಗುಪ್ಪ ತಾಲೂಕಿನ ಮುದ್ನಾಳ ಗ್ರಾಮದಲ್ಲಿ ನಡೆದಿದೆ. ಐದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಸಂಗಮೇಶ ಕೊಳಲಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.
ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನೆಚ್ಚಿನ ಶಿಕ್ಷಕ ಬೇರೆಡೆಗೆ ಹೋಗುತ್ತಿರುವುದರಿಂದ ಬೇಸರಗೊಂಡು ವಿದ್ಯಾರ್ಥಿಗಳು ಅತ್ತರು. ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗ್ಬೇಡಿ ಸರ್ ಎಂದು ಮಕ್ಕಳು ಅಳುತ್ತಾ ತಬ್ಬಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮ ಮುಗಿಸಿ ಕೊಠಡಿಯಿಂದ ಸಂಗಮೇಶ ಅವರು ಹೊರಬರುತ್ತಿದ್ದಂತೆಯೇ ಬಿಗಿದಪ್ಪಿಕೊಂಡು, ಕೈಮುಗಿದ ಮಕ್ಕಳು ನೀವು ಹೋಗಬೇಡಿ, ಇಲ್ಲಿಯೇ ಇರಿ ಎಂದು ಕಣ್ಣೀರು ಹಾಕಿದರು. ಇದನ್ನು ನೋಡಿ ಶಿಕ್ಷಕ ಸಂಗಮೇಶ ಅವರ ಕಣ್ಣಂಚಿನಿಂದಲೂ ನೀರು ಚಿಮ್ಮಿದವು. ಇದಕ್ಕೆ ಸಾಕ್ಷಿಯಾಗಿದ್ದ ಮುಖ್ಯಗುರು, ಸಹ ಶಿಕ್ಷಕರು ಹಾಗೂ ಗ್ರಾಮದ ಗಣ್ಯರ ಕಣ್ಣು ತೇವಗೊಂಡವು. ಇದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.
ಐದು ವರ್ಷದ ಹಿಂದೆ ದೂರದ ಬಾಗಲಕೋಟೆ ಜಿಲ್ಲೆಯಿಂದ ಇಲ್ಲಿಗೆ ಬಂದಿರುವೆ. ಇಲ್ಲಿನ ಜನ ಹೇಗಿದ್ದಾರೋ ಎಂದು ಆರಂಭದಲ್ಲಿ ಭಯಗೊಂಡಿದ್ದೆ. ನಂತರ ಇಲ್ಲಿನ ಜನರ ಮತ್ತು ಮಕ್ಕಳ ಪ್ರೀತಿ, ಸ್ನೇಹ ಇಷ್ಟು ವರ್ಷ ಇಲ್ಲಿ ನೆಲೆ ನಿಲ್ಲುವಂತೆ ಮಾಡಿತು. ಮಕ್ಕಳ ಜತೆಗೆ ಮರೆಯಲಾರದಂಥ ಬಾಂಧವ್ಯ ಬೆಸೆದಿದೆ ಎಂದು ಸಂಗಮೇಶ ಭಾವುಕರಾಗಿ ಹೇಳಿದರು.
ಇದನ್ನೂ ಓದಿ:ನೆಚ್ಚಿನ ಶಿಕ್ಷಕ ವರ್ಗಾವಣೆ: ಶಾಲೆಗೆ ಬೀಗ ಜಡಿದು ವಿದ್ಯಾರ್ಥಿಗಳ ಪ್ರತಿಭಟನೆ