ಶಾಲೆಗೆ ಹೋಗಲು ಜೆಸಿಬಿ ಏರಿದ ವಿದ್ಯಾರ್ಥಿಗಳು- ವಿಡಿಯೋ - JCB
ಕೊಪ್ಪಳ:ಬಸ್ ವ್ಯವಸ್ಥೆ ಇಲ್ಲದೆ ಜೆಸಿಬಿ ವಾಹನದಲ್ಲಿ ಕುಳಿತು ವಿದ್ಯಾರ್ಥಿಗಳು ಶಾಲೆಗೆ ತೆರಳಿದ ದೃಶ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ಇಂದು ಕಂಡುಬಂತು. ಶಾಖಾಪುರದಿಂದ ಹಿರೇಅರಳಿಹಳ್ಳಿಗೆ ಅಂದಾಜು 4 ಕಿಲೋ ಮೀಟರ್ ಅಂತರವಿದೆ. ಶಾಖಾಪುರದಿಂದ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ. ಪ್ರತಿದಿನ ಕಾಲ್ನಡಿಗೆಯಲ್ಲೇ ಹಿರೇಹರಳಹಳ್ಳಿ ಶಾಲೆಗೆ ಮಕ್ಕಳು ತೆರಳಬೇಕಾದ ಅನಿವಾರ್ಯತೆ ಇದೆ.
ದಿನನಿತ್ಯ ಕಾಲ್ನಡಿಗೆಯಲ್ಲಿಯೇ ಸಂಚರಿಸುವ ವಿದ್ಯಾರ್ಥಿಗಳು ಇಂದು ದಾರಿಯಲ್ಲಿ ಸಂಚರಿಸುತ್ತಿದ್ದ ಜೆಸಿಬಿ ವಾಹನದಲ್ಲಿ ಕುಳಿತು ಪ್ರಯಾಣಿಸಿ ಶಾಲೆ ತಲುಪಿದರು. ಗ್ರಾಮಸ್ಥರೊಬ್ಬರು ಮಕ್ಕಳು ಜೆಸಿಬಿ ವಾಹನದಲ್ಲಿ ಶಾಲೆಗೆ ತೆರಳಿದ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಒಂದೆಡೆ ಸರ್ಕಾರ ಉಚಿತ ಪ್ರಯಾಣದಂತಹ ಯೋಜನೆ ಘೋಷಿಸಿದೆ. ಮತ್ತೊಂದೆಡೆ, ಶಾಲಾ ವಿದ್ಯಾರ್ಥಿಗಳಿಗೆ ಸಂಚರಿಸಲು ಕನಿಷ್ಠ ಸಾರಿಗೆ ಸೌಲಭ್ಯ ಅಲಭ್ಯವಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಶಾಲಾ ಮಕ್ಕಳಿಗಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಶಾಖಾಪುರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ವಿಜಯನಗರದಲ್ಲಿ ಬಂಜಾರ ಸಮುದಾಯದಿಂದ ಸೀತ್ಲಾ ಹಬ್ಬ ಸಂಭ್ರಮ- ವಿಡಿಯೋ