ಬೆಳಗಾವಿಯಲ್ಲಿ ನಿಗದಿಗಿಂತ ಹೆಚ್ಚು ಭೂ ಬಾಡಿಗೆ ವಸೂಲಿ ಆರೋಪ.. ಗುತ್ತಿಗೆದಾರನ ವಿರುದ್ಧ ಬೀದಿಬದಿ ವ್ಯಾಪಾರಿಗಳ ಆಕ್ರೋಶ
Published : Sep 23, 2023, 4:54 PM IST
ಬೆಳಗಾವಿ: ಬೀದಿ ಬದಿ ವ್ಯಾಪಾರಿಗಳಿಂದ ಹೆಚ್ಚು ಭೂ ಬಾಡಿಗೆ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿ ಇಂದು ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ವ್ಯಾಪಾರಿಗಳು ಧರಣಿ ನಡೆಸಿದರು. ಬೀದಿಬದಿ ತರಕಾರಿ ಮಾರುವವರಿಂದ 10 ರೂ. ತಳ್ಳುವ ಗಾಡಿಯ ಮೇಲೆ ಹಣ್ಣು-ತರಕಾರಿ ಮಾರಾಟ ಮಾಡುವವರಿಂದ 50 ರೂ. ಪಾವಬಾಜಿ, ಬೇಲಪುರಿ, ಐಸಕ್ರೀಮ್, ಫಾಸ್ಟ್ ಪುಡ್, ಎಳನೀರು, ಚೈನೀಸ್ ಫುಡ್ ಸೇರಿ ಇನ್ನಿತರ ತಿನಿಸುಗಳನ್ನು ಬೀದಿಬದಿ ವ್ಯಾಪಾರ ಮಾಡುವವರಿಂದ 50 ರೂ. ಭೂ ಬಾಡಿಗೆಯನ್ನು ಗುತ್ತಿಗೆದಾರರು ವಸೂಲಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಗುತ್ತಿಗೆದಾರ ಮಾತ್ರ ಹೆಚ್ಚು ಹಣ ವಸೂಲಿ ಮಾಡುತ್ತಿದ್ದು, ಇದಕ್ಕೆ ಒಪ್ಪದಿದ್ದರೆ ಗೂಂಡಾಗಳನ್ನು ಕರೆದುಕೊಂಡು ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಬೀದಿಬದಿ ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ.
ವ್ಯಾಪಾರಿ ಸರಸ್ವತಿ ಜಾಧವ್ ಎಂಬುವರು ಮಾತನಾಡಿ, ಈ ಮೊದಲು 10 ರೂ. ಮಾತ್ರ ತೆಗೆದುಕೊಳ್ಳುತ್ತಿದ್ದರು. ಈಗ ಹೆಚ್ಚಿಗೆ ವಸೂಲಿ ಮಾಡುತ್ತಿದ್ದಾರೆ. ದಿನಪೂರ್ತಿ ದುಡಿದರೂ ಎರಡು ಸಾವಿರ ರೂ. ವ್ಯಾಪಾರ ಆಗುವುದಿಲ್ಲ. ಬಾಡಿಗೆ ಹೇಗೆ ಕಟ್ಟುವುದು?. ಮನೆ ಹೇಗೆ ನಡೆಸುವುದು ಎಂದು ಪ್ರಶ್ನಿಸಿದರು. ನಗರ ಸೇವಕ ಶಂಕರ ಪಾಟೀಲ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಂದ 10 ರೂ. ಮಾತ್ರ ವಸೂಲಿ ಮಾಡಬೇಕು. ಆದರೆ, ಗುತ್ತಿಗೆದಾರ ಪಾಲಿಕೆ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ 50, 100, 200ರೂ. ವಸೂಲಿ ಮಾಡುವ ಮೂಲಕ ಬಡ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ಅಲ್ಲದೇ ಹೆಚ್ಚಿಗೆ ಹಣ ಕೊಡದವರ ತಕ್ಕಡಿ ಒಯ್ಯುವುದು, ಅವಾಚ್ಯ ಶಬ್ಧಗಳಿಂದ ನಿಂದಿಸಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ:ಸಹಕಾರಿ ಸಕ್ಕರೆ ಕಾರ್ಖಾನೆ ಸಭೆ : ಆಡಳಿತ ಮಂಡಳಿ ಮತ್ತು ರೈತರ ನಡುವೆ ಮಾತಿನ ಚಕಮಕಿ