ಮನೆ ಮುಂದೆ ಆಟ ಆಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ : ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಬೀದಿ ನಾಯಿ ದಾಳಿ
ತುಮಕೂರು : ಮನೆ ಎದುರು ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ 17ನೇ ವಾರ್ಡಿನಲ್ಲಿ ಮನೆ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಳೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿದೆ. ಘಟನೆಯಲ್ಲಿ ಸುಪೀಯಾ ಎಂಬ ಮಗುವಿಗೆ ಗಂಭೀರ ಗಾಯವಾಗಿದ್ದು, ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಯಿ ದಾಳಿ ನಡೆಸುತ್ತಿರುವ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುಣಿಗಲ್ ಪಟ್ಟಣದ 17ನೇ ವಾರ್ಡಿನಲ್ಲಿ ಮನೆ ಮುಂದೆ ಐದಾರು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ನಾಲ್ಕು ವರ್ಷದ ಮಗುವಿನ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದೆ. ಈ ವೇಳೆ ಜೊತೆಗಿದ್ದ ಮಕ್ಕಳು ಕಿರುಚಾಟ ನಡೆಸಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮಗುವಿನ ಬಳಿ ಧಾವಿಸಿ ನಾಯಿಯಿಂದ ಮಗುವನ್ನು ಪಾರು ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಬೀದಿ ನಾಯಿ ಮಗುವನ್ನು ಕಚ್ಚಿ ಗಾಯಗೊಳಿಸಿತ್ತು. ತಕ್ಷಣ ಮಗುವನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ :5 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ; ಪ್ರಾಣಾಪಾಯದಿಂದ ಪಾರು