ಗಡಿ ಜಿಲ್ಲೆಯಲ್ಲಿ ಹಾರಿ ಬಂತೊಂದು ವಿಚಿತ್ರ ಎಲೆಕ್ಟ್ರಿಕಲ್ ಬಲೂನು! - ಬೆಳಗಾವಿಯ ಎಲೆಕ್ಟ್ರಿಕಲ್ ಬಲೂನು
ಬೆಳಗಾವಿ:ಜಿಲ್ಲೆಯಲ್ಲಿ ವಿಚಿತ್ರವಾದ ಬಲೂನ್ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭಯ ತರಿಸಿದೆ. ಬೈಲಹೊಂಗಲ ತಾಲೂಕಿನ ಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ಈ ಬೃಹತ್ ಆದ ಬಲೂನ್ ಪತ್ತೆಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಲೂನ್ ಎಲ್ಲಿಂದ ಬಂದಿದೆ? ಹೇಗೆ ಬಂತು? ಯಾವಾಗ ಹಾರಿ ಬಂದಿದೆ? ಎಂಬುದರ ಬಗ್ಗೆ ಗೊತ್ತಾಗಿಲ್ಲ. ಗ್ರಾಮಸ್ಥರಿಗೂ ಕೂಡ ಈ ಬಗ್ಗೆ ಮಾಹಿತಿ ಇಲ್ಲ.
ಆದರೆ, ಈ ಬಲೂನಿನಲ್ಲಿ ಕೆಲ ಎಲೆಕ್ಟ್ರಿಕ್ ಮಷಿನ್ಗಳು ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮತ್ತು ಚರ್ಚೆಗಳನ್ನು ಹುಟ್ಟು ಹಾಕಿದೆ. ಈ ಬಲೂನ್ ಏನು ಎಂದು ತಿಳಿಯದೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬೈಲಹೊಂಗಲ ಪೊಲೀಸರು ಬಲೂನ್ ಅನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಚೈನೀಸ್ ಸ್ಪೈ ಬಲೂನ್ ಸದ್ದು ಮಾಡಿತ್ತು. ಅದೇ ರೀತಿ ಇದು ಕೂಡ ಇರಬಹುದೆಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿಸಿದೆ.
ಗ್ರಾಮಸ್ಥರಲ್ಲಿ ಬಲೂನ್ ಆಂತಕ ಮೂಡಿಸುತ್ತಿದ್ದಂತೆ ಎಸ್ಪಿ ಡಾ ಸಂಜೀವ ಪಾಟೀಲ್ ಕೂಡ ಈ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಈ ಬಲೂನ್ ಬಗ್ಗೆ ನಾವು ಪ್ರಾಥಮಿಕ ವಿಚಾರಣೆ ನಡೆಸಿದ್ದೇವೆ. ಇದು ಎತ್ತರದ ಪ್ರದೇಶಗಳಲ್ಲಿ ಹವಾಮಾನವನ್ನು ನಿರ್ಧರಿಸಲು ಬಳಸುವ ಸಾಧನವಾಗಿದೆ. ಯಾವುದೇ ಆತಂಕ ಬೇಡ. ನಾವು ಬಲೂನಿನ ಮೂಲವನ್ನು ಪತ್ತೆ ಮಾಡಿದ್ದೇವೆ. ಇದು ಎತ್ತರದ ತಾಪಮಾನದ ಆರ್ದ್ರತೆ ಗಾಳಿಯ ವೇಗ ಮತ್ತು ಗಾಳಿಯ ಒತ್ತಡ ಸೇರಿದಂತೆ ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಬಳಸುವ ಏಕೈಕ ಬಳಕೆಯ ಸಾಧನವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನು ಹೊಡೆದು ಕೊಂದೇ ಬಿಟ್ಟರು: ಪಾನಮತ್ತ ಯುವಕರ ದುಷ್ಕೃತ್ಯ