ರಾಜ್ಯ ಸರ್ಕಾರ 6ನೇ ರೈತರಿಗೆ 'ಕಡಲೆಪುರಿ ಭಾಗ್ಯ' ಕರುಣಿಸಿದೆ: ಕಡಲೆಪುರಿ ತಿಂದು ಕಾವೇರಿ ಹೋರಾಟಗಾರರ ಪ್ರತಿಭಟನೆ
Published : Oct 19, 2023, 10:42 PM IST
ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಆರನೇ ಗ್ಯಾರಂಟಿಯಾಗಿ ರೈತರಿಗೆ ಕಡ್ಲೆಪುರಿ ಭಾಗ್ಯ ನೀಡಿದೆ ಎಂದು ಕಾವೇರಿ ಹೋರಾಟಗಾರರು ಗುರುವಾರ ಕಡ್ಲೆಪುರಿ ತಿಂದು ವಿಭಿನ್ನವಾಗಿ ಪ್ರತಿಭಟಿಸಿದರು.
ಮಂಡ್ಯ ನಗರದ ಸರ್‌ಎಂವಿ ಪ್ರತಿಮೆಯೆದುರು ಕೈಗೊಂಡ ರೈತ ಹಿತರಕ್ಷಣಾ ಸಮಿತಿಯ ಅನಿರ್ದಿಷ್ಟಾವಧಿ ಧರಣಿ 46ನೇ ದಿನಕ್ಕೆ ಕಾಲಿಟ್ಟಿತು. ಇದರ ಪ್ರಯುಕ್ತ ಸಮಿತಿ ಸದಸ್ಯರು, ರೈತರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ರಾಜ್ಯಸರ್ಕಾರ ಕಡ್ಲೆಪುರಿ ಪರಿಷೆ ಇಟ್ಟು ರೈತರಿಗೆ ದ್ರೋಹ ಮಾಡಿ ದಸರಾ ಸಂಭ್ರಮದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳಿಂದ ನೆರೆರಾಜ್ಯಕ್ಕೆ ನಿರಂತರ ನೀರು ಹರಿಸಿ ಜಲಾಶಯಗಳನ್ನು ಬರಿದು ಮಾಡುತ್ತಿರುವ ರಾಜ್ಯ ಸರ್ಕಾರ ಬೆಳೆದು ನಿಂತಿರುವ ಬೆಳೆಗಳನ್ನು ರಕ್ಷಿಸಲು ನೀರು ನೀಡುತ್ತಿಲ್ಲ. ಹೊಸ ಬೆಳೆ ಹಾಕಲು ಅವಕಾಶ ನೀಡಿಲ್ಲ. ಇನ್ನೇನಿದ್ದರೂ ರೈತರಿಗೆ ಕಡ್ಲೆಪುರಿ ಗತಿಯಾಗಿದೆ. ಅದನ್ನೇ ತಿಂದು ಜೀವಿಸುವ ದಿನ ದೂರವಿಲ್ಲ. ಅಷ್ಟರ ಮಟ್ಟಿಗೆ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದರು.
ಕಾವೇರಿ ನೀರು ನಿಯಂತ್ರಣಾ ಪ್ರಾಧಿಕಾರ ರೈತರ ಕುತ್ತಿಗೆ ಕುಯ್ಯುವ ಕೆಲಸ ಮಾಡುತ್ತಿದೆ. ಇಲ್ಲದ ನೀರನ್ನು ಬಿಡುವುದು ಹೇಗೆ?. ತಮಿಳುನಾಡು ನೀರಿನ ಹಕ್ಕು ಸ್ಥಾಪಿಸಿ ಏಕಮುಖ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಅದೇ ರೀತಿ ರಾಜ್ಯ ಸರ್ಕಾರ ನಿರಂತರವಾಗಿ ನೀರು ಹರಿಸುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.