ಶ್ರೀನಿವಾಸ ಕಲ್ಯಾಣೋತ್ಸವ ಭಕ್ತಿಯಲ್ಲಿ ಮಿಂದೆದ್ದ ಜನಸಾಗರ
ಬೆಂಗಳೂರು: ಕೇಸರಿ ಫೌಂಡೇಶನ್ ವತಿಯಿಂದ ತಮ್ಮೇಶ್ ಗೌಡ ಅವರ ನೇತೃತ್ವದಲ್ಲಿ ಬ್ಯಾಟರಾಯನಪುರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವು ಅದ್ದೂರಿಯಾಗಿ ನೆರವೇರಿಸಲಾಯಿತು. ಈ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಶ್ರೀನಿವಾಸ ದರ್ಶನ ಮಾಡಿದರು. ಬ್ಯಾಟರಾಯನಪುರ ಎಪಿಎಂಸಿ ಮೈದಾನದ ಬೃಹತ್ ವೇದಿಕೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3:30 ರಿಂದ ಪೂಜಾ ಕೈಂಕರ್ಯ ಆರಂಭಗೊಂಡಿತು. ತಿರುಮಲ ತಿರುಪತಿ ದೇವಾಲಯದ ಆಸ್ಥಾನ ಗಾಯಕರಾದ ಶ್ರೀ ಕೃಷ್ಣ ರವರಿಂದ ಸಂಜೆ ಸಂಗೀತೋತ್ಸವ ಕಾರ್ಯಕ್ರಮದೊಂದಿಗೆ ಭಕ್ತಾಧಿಗಳು ದೇವರ ಭಕ್ತಿಯಲ್ಲಿ ಮಿಂದೆದ್ದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಿ, ವೈಭವದ ಶ್ರೀನಿವಾಸ ಕಲ್ಯಾಣೋತ್ಸವದಿಂದ ತಿರುಪತಿಯಲ್ಲಿ ವೆಂಕಟರಮಣ ಸ್ವಾಮಿ ದರ್ಶನ ಮಾಡಿದಷ್ಟೆ ಆನಂದವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ವಿಶ್ರಾಂತಿ ರಹಿತವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಷ್ಟಗಳು ಆರ್ಥಿಕ ದಿವಾಳಿಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮುನ್ನಡೆ ಸಾಧಿಸುತ್ತಿದೆ. ಇಂತಹ ಆದರ್ಶ ನಾಯಕರು ಸಿಕ್ಕಿರುವುದು ನಮ್ಮ ಪುಣ್ಯ ಎಂದರು.
ಶ್ರೀನಿವಾಸ ಕಲ್ಯಾಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿಸಭೆಯಲ್ಲಿ ಮಾತನಾಡಿದ ತಮ್ಮೇಶ್ ಗೌಡ, ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಎಲ್ಲಾ ಜನರಿಗೆ ಒಳ್ಳೆಯದಾಗಲು ಕ್ಷೇತ್ರವು ಅಭಿವೃದ್ದಿಯಾಗಲಿ ಎಂಬ ಸಂಕಲ್ಪದೊಂದಿಗೆ ಶ್ರೀನಿವಾಸ ಕಲ್ಯಾಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾಮಠದ ಸಿದ್ದಲಿಂಗ ಮಹಾಸ್ವಾಮಿ, ಸ್ಪಟಿಕಾಪುರ ಮಹಾಸಂಸ್ಥಾನದ ವಚನಾನಂದ ಮಹಾಸ್ವಾಮಿ, ಕೇಂದ್ರ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಿತು. ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ತಿರುಮಲ ತಿರುಪತಿ ದೇವಾಲಯದ ಲಡ್ಡು ಪ್ರಸಾದ ಮತ್ತು ಕ್ಯಾಲೆಂಡರನ್ನು ವಿತರಿಸಿ, ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ:'ಹಾಸನದಿಂದ ನಾನೇ ಜೆಡಿಎಸ್ ಅಭ್ಯರ್ಥಿ..': ಭವಾನಿ ರೇವಣ್ಣ ಸ್ವಯಂ ಘೋಷಣೆ