ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ಜಲಪಾತಕ್ಕೆ ಬಂತು ಕಳೆ: ರೈತರಲ್ಲೂ ಹುರುಪು ತಂತು ಮಳೆ
ಬೆಳಗಾವಿ : ಕಾದು ಕೆಂಡದಂತಾಗಿದ್ದ ಧರೆಗೆ ಕೊನೆಗೂ ಮಳೆರಾಯ ತಂಪೆರೆದಿದ್ದಾನೆ. ಬೆಳಗಾವಿ ಜಿಲ್ಲೆಯ ಹಲವೆಡೆ ಸುರಿದ ಮಳೆ ರೈತಾಪಿ ವರ್ಗದಲ್ಲಿ ಹೊಸ ಚೈತನ್ಯ ಮೂಡಿಸಿದೆ. ಸವದತ್ತಿ ತಾಲೂಕಿನ ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನ ಸಮೀಪದ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.
ಸಕಾಲಕ್ಕೆ ಮಳೆಯಾಗದೆ ಕಂಗೆಟ್ಟಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸತತ 2 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದು, ಸೊಗಲ ಜಲಪಾತಕ್ಕೆ ಮೈದುಂಬಿ ಹರಿಯುತ್ತಿದೆ. ಇದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಈ ಬಾರಿ ಮುಂಗಾರು ತಡವಾದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದ ರೈತರು ಕೃಷಿ ಚಟುವಟಿಕೆಗೆ ಮುಂದಾಗದೇ ಆಕಾಶದತ್ತ ಮುಖ ಮಾಡಿ ಕುಳಿತುಕೊಂಡಿದ್ದರು.
ಇಂದಿನಿಂದ ಜಿಲ್ಲೆಯ ಕೆಲವೆಡೆ ಮಳೆ ಆರಂಭವಾಗಿದೆ. ರೈತರು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಭೂಮಿ ತಂಪಾಗುವಂತೆ ಎಲ್ಲೆಡೆ ಹುಯ್ಯೋ ಹುಯ್ಯೋ ಮಳೆರಾಯ ಎಂದು ಅನ್ನದಾತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಮಳೆಗಾಗಿ ಈಗಾಗಲೇ ನಾಡಿನ ವಿವಿಧ ದೇಗುಲಗಳಲ್ಲಿ ಪೂಜೆ, ಪ್ರಾರ್ಥನೆಗಳಲ್ಲಿ ಸಲ್ಲಿಸಿರುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು.
ಇದನ್ನೂ ಓದಿ :ಚನ್ನಗಿರಿಯಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ, ನೀರಿನಲ್ಲಿ ತೇಲಿದ ದ್ವಿಚಕ್ರ ವಾಹನಗಳು