ರಾಯರ ಮಧ್ಯಾರಾಧನೆ: ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ- ವಿಡಿಯೋ - ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ
Published : Sep 1, 2023, 6:16 PM IST
ರಾಯಚೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಹಿನ್ನೆಲೆಯಲ್ಲಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಇಂದು ರಾಯರ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನೆರವೇರಿಸಿದರು. ಮಹೋತ್ಸವದ ನಾಲ್ಕನೇ ದಿನವಾದ ಇಂದು, ಬೆಳಗ್ಗೆ ಮೂಲ ಬೃಂದಾವನದ ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ ನಡೆಯಿತು. ನಂತರ ಮೂಲಬೃಂದಾವನಕ್ಕೆ ಜೇನು, ತುಪ್ಪ, ಹಾಲು, ಮೊಸರು, ಹಣ್ಣು-ಹಂಪಲು ಮೊದಲಾದವುಗಳಿಂದ ಶ್ರೀಗಳು ಮಂತ್ರ-ಘೋಷಗಳೊಂದಿಗೆ ಅಭಿಷೇಕ ಮಾಡಿದರು.
ಇದಾದ ಬಳಿಕ ಪ್ರಾಂಗಣದಲ್ಲಿ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಪ್ರಹ್ಲಾದರಾಜರ ಚಿನ್ನದ ಪಲ್ಲಕ್ಕಿ ಉತ್ಸವ ಹಾಗೂ ರಾಯರ ರಥೋತ್ಸವಕ್ಕೆ ಸುಬುಧೇಂದ್ರ ತೀರ್ಥರು ಚಾಲನೆ ನೀಡಿದರು. ವಾದ್ಯಮೇಳ, ಭಕ್ತರ ಘೋಷಣೆ ಮೊಳಗಿತು. ಮಠದ ಆವರಣದೊಳಗಿನ ಎಲ್ಲಾ ಯತಿಗಳ ಬೃಂದಾವನಕ್ಕೆ ಪೂಜೆ ನಡೆಯಿತು. ಸಂಜೆ ಮಠದ ಮುಂಭಾಗದ ಯೋಗೀಂದ್ರ ಸಭಾ ಮಂಟಪದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ನಟ ಜಗ್ಗೇಶ್ ಮಧ್ಯಾರಾಧನೆಯಲ್ಲಿ ಭಾಗಿಯಾಗಿದ್ದರು. ನಾಳೆ ಉತ್ತರರಾಧನೆ ನಡೆಯಲಿದೆ.
ಇದನ್ನೂ ಓದಿ:ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ: ತಿರುಪತಿ ತಿರುಮಲ ದೇವಾಲಯದಿಂದ ಶೇಷ ವಸ್ತ್ರ