ಶ್ರೀರಾಮನ ವಿಗ್ರಹಕ್ಕೆ ಕಲ್ಲು ದೊರೆತ ಜಮೀನಿನಲ್ಲಿ ವಿಶೇಷ ಪೂಜೆ-ವಿಡಿಯೋ - ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ
Published : Jan 17, 2024, 11:37 AM IST
|Updated : Jan 17, 2024, 11:45 AM IST
ಮೈಸೂರು:ಅಯೋಧ್ಯೆಯಲ್ಲಿಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಶ್ರೀರಾಮನ ವಿಗ್ರಹಕ್ಕೆ ಶಿಲೆ ದೊರೆತ ಮೈಸೂರಿನ ಜಮೀನೊಂದರಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜೈಪುರ ಹೋಬಳಿಯ ಗುಜ್ಜೇಗೌಡನಪುರ ರಾಮದಾಸ್ ಎಂಬವರ ಜಮೀನಿನಿಂದ ಅಯೋಧ್ಯೆಗೆ ಬೇಕಾದ ಕಲ್ಲುಗಳು ಪೂರೈಕೆಯಾಗಿವೆ. ಹೀಗಾಗಿ, ಮಂಗಳವಾರ ಸಂಜೆ ಜಮೀನಿನಲ್ಲಿ ಶ್ರೀರಾಮನ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಅರಮನೆಯ ಗಜಪಡೆಗಳಿಗೆ ಪೂಜೆ ಸಲ್ಲಿಸುವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಪೂಜೆ ಪುನಸ್ಕಾರಗಳು ನಡೆದವು. ಈ ವೇಳೆ ಗ್ರಾಮಸ್ಥರು ಪಾಲ್ಗೊಂಡು ಶ್ರೀರಾಮನಿಗೆ ನಮಿಸಿದರು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಬೇಕಿದ್ದ ಐದು ಕಲ್ಲುಗಳು ಇಲ್ಲಿಂದಲೇ ರವಾನೆಯಾಗಿವೆ. ದೇವಾಲಯದ ಆವರಣದಲ್ಲಿ ಪ್ರತಿಷ್ಟಾಪನೆ ಆಗಲಿರುವ ರಾಮ, ಸೀತೆ, ಲಕ್ಷ್ಮಣ, ಭರತ ಹಾಗೂ ಶತ್ರುಜ್ಞ ವಿಗ್ರಹಗಳ ನಿರ್ಮಾಣಕ್ಕೆ ಗುಜ್ಜೆಗೌಡನಪುರದ ಜಮೀನಿನಿಂದ ಶಿಲೆಗಳನ್ನು ರವಾನಿಸಿರುವುದು ವಿಶೇಷ. ಗುಜ್ಜೇಗೌಡನಪುರ ನಿವಾಸಿ ರಾಮದಾಸ್ ಅವರ ಜಮೀನನ್ನು ಗುತ್ತಿಗೆ ಪಡೆದು ಕ್ವಾರಿ ನಡೆಸುತ್ತಿರುವ ಶ್ರೀನಿವಾಸ್ ನಟರಾಜು ಎಂಬವರು ವಿಗ್ರಹ ತಯಾರಿಕೆಗೆ ಬೇಕಿರುವ ಕಲ್ಲುಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಹರಿದು ಬಂದ ಅಭಿನಂದನೆಗಳ ಮಹಾಪೂರ