ಶಿವಮೊಗ್ಗ: ಟೀಂ ಇಂಡಿಯಾ ವಿಶ್ವಕಪ್ ಜಯಿಸಲಿ ಎಂದು ದೇವಸ್ಥಾನ, ದರ್ಗಾದಲ್ಲಿ ವಿಶೇಷ ಪೂಜೆ - etv bharat karnataka
Published : Nov 19, 2023, 3:52 PM IST
ಶಿವಮೊಗ್ಗ: ಭಾರತ ಈ ಬಾರಿಯ ಕ್ರಿಕೆಟ್ ವಿಶ್ವಕಪ್ ಮುಡಿಗೇರಿಸಿಕೊಳ್ಳಬೇಕೆಂದು ಎಂದು ಶಿವಮೊಗ್ಗದ ಕ್ರಿಕೆಟ್ ಅಭಿಮಾನಿಗಳು, ರಾಜಕಾರಣಿಗಳು ಮಂದಿರ ಹಾಗೂ ದರ್ಗಾದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಶಾಸಕ ಚನ್ನಬಸಪ್ಪ ಅವರು ಕೋಟೆ ಯುವಕ ಸಂಘದೊಂದಿಗೆ ಕೋಟೆ ಆಂಜನೇಯ ದೇವಾಲಯದಲ್ಲಿ ಶ್ರೀರಾಮ ಹಾಗೂ ಆಂಜನೇಯನಿಗೆ ಪೂಜೆ ಸಲ್ಲಿಸಿ, ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಅದೇ ರೀತಿ ಸಿಗಂದೂರು ದೇವಾಲಯದಲ್ಲಿ ಸಿಗಂದೂರು ಚೌಡೇಶ್ವರಿ ದೇವಾಲಯ ಸಮಿತಿ ವತಿಯಿಂದ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲಿ ಎಂದು ವಿಶೇಷ ಚಂಡಿಕಾ ಹೋಮವನ್ನು ನಡೆಸಲಾಯಿತು. ಮತ್ತೊಂದೆಡೆ ಶಿವಮೊಗ್ಗದ ಮಹಾವೀರ ವೃತ್ತದ ಬಳಿಯ ಹಜ್ರತ್ ಸೈಯದ್ ಷಾ ಅಲೀಂ ದೀವಾನ್ ಷಾ ಖಾದ್ರಿ ದರ್ಗಾದಲ್ಲಿ ಮುಸ್ಲಿಂ ಬಾಂಧವರು ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಅನ್ನು ತನ್ನದಾಗಿಸಿಕೊಳ್ಳಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ದರ್ಗಾದಲ್ಲಿ ಹೂವು ಹಾಗೂ ಅಕ್ತಾರ್ ಹಾಕಿ ಪ್ರಾರ್ಥನೆ ಮಾಡಲಾಯಿತು.
ಇನ್ನು ನೆಹರು ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ವಿಶೇಷವಾಗಿ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ಸಂಸದ ರಾಘವೇಂದ್ರ ಅವರು ಕ್ರಿಕೆಟ್ ಬ್ಯಾಟ್ ಮೇಲೆ ಸಹಿ ಹಾಕಿದರು. ಅಲ್ಲದೆ, ಭಾರತ ತಂಡ ಎಷ್ಟು ರನ್ ಗಳಿಸಬಹುದು ಎಂದು ರನ್ ಬರೆದು ಶುಭ ಹಾರೈಸಿದರು. ಶಿವಪ್ಪ ನಾಯಕ ವೃತ್ತದಲ್ಲಿ ಕ್ರೀಡಾಭಿಮಾನಿಗಳು ಭಾರತ ಮಾತೆ ಹಾಗೂ ಭಾರತ ಕ್ರಿಕೆಟ್ ತಂಡದ ಆಟಗಾರರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಭಾರತ ತಂಡ ವಿಶ್ವಕಪ್ ಎತ್ತಿಹಿಡಿಯಲಿ ಎಂದು ಹಾರೈಸಿದರು.
ಇದನ್ನೂ ಓದಿ:ಗೆದ್ದು ಬಾ ಭಾರತ: ದೇಶಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ-ವಿಡಿಯೋ